
ಕನ್ನಡ ಚಿತ್ರರಂಗದ ನಟಿ ಮಾಜಿ ಸಂಸದೆ ರಮ್ಯಾ ರಾಜಕೀಯದಿಂದ ದೂರವಾಗಿದ್ದ ಅವರು ಕಾಂಗ್ರೆಸ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮಂಗಳವಾರ ಅವರು ಮಂಡ್ಯದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದು . ಈ ವೇಳೆ ಅವರು ‘ಗೋಬ್ಯಾಕ್’ ಅಭಿಯಾನ ಎದುರಿಸಿದ್ದಾರೆ. ಸಕ್ಕರೆ ನಾಡು ಮಂಡ್ಯದಲ್ಲಿ ದಿವಂಗತ ಅಂಬರೀಶ್ ಅಭಿಮಾನಿಗಳು ರಮ್ಯಾ ಕ್ಷೇತ್ರ ಪ್ರವೇಶಕ್ಕೆ ಫುಲ್ ಗರಂ ಆಗಿದ್ದಾರೆ. ರಮ್ಯಾ ವಿರುದ್ಧ ಕೆಂಡಾಮಂಡಲವಾಗಿ ಮಂಗಳವಾರ ‘ಗೋಬ್ಯಾಕ್ ರಮ್ಯಾ’ ಅಭಿಯಾನ ಆರಂಭಿಸಿದ್ದಾರೆ. ಇದರಿಂದ ರಮ್ಯಾ ಅವರಿಗೆ ಇರುಸು ಮುರುಸು ಆಗಿದೆ ಎಂದು ತಿಳಿದು ಬಂದಿದೆ. ಮೂರು ವರ್ಷಗಳಿಂದ ರಾಜಕೀಯದಿಂದ ದೂರವಾಗಿದ್ದ ರಮ್ಯಾ ಅವರು ಮೇ 1ರಿಂದ ಕಾಂಗ್ರೆಸ್ ಪರ ಪ್ರಚಾರ ಆರಂಭಿಸಿದ್ದಾರೆ. ಎರಡನೇ ದಿನ ಮಂಡ್ಯದಲ್ಲಿ ಅವರಿಗೆ ಪ್ರತಿರೋಧದ ಕಾವು ತಟ್ಟಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಅಧಿಕಾರ ಅನುಭವಿಸಲು ನಮ್ಮ ನಟ ಮತ್ತು ಕಾಂಗ್ರೆಸ್ ನಾಯಕ ರೆಬಲ್ ಸ್ಟಾರ್ ಅಂಬರೀಶ್ ಅವರು ಕಾರಣ. ಅವರು ನಿಧನರಾದ ಸಮಯದಲ್ಲಿ ರಮ್ಯಾ ಅಂತಿಮ ದರ್ಶನಕ್ಕೆ ಬರಲಿಲ್ಲ ಎಂದು ಅಂಬರೀಶ್ ಅಭಿಮಾನಿ ಸಂಘದ ಸದಸ್ಯರು ಆಕ್ರೋಶ ಹೊರ ಹಾಕಿದ್ದಾರೆ. ಅದೇ ರೀತಿ ಮಂಡ್ಯಕ್ಕೆ ರಮ್ಯಾ ಕೊಡುಗೆ ಶೂನ್ಯ ಎಂದು ಮಂಡ್ಯದ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .