July 27, 2024

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಸಾತನೂರು ಬಳಿ ಶುಕ್ರವಾರ ಮಧ್ಯರಾತ್ರಿ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಗೋರಕ್ಷಕರೇ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಂಡ್ಯ ಮೂಲದ ಇದ್ರೀಸ್ ಪಾಷ ಎನ್ನುವ 39 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ವಾಹನದಲ್ಲಿ ಜಾನುವಾರು ಸಾಗಿಸುತ್ತಿರುವ ವೇಳೆ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್‌ ಕೆರೆಹಳ್ಳಿ ನೇತೃತ್ವದ ತಂಡ ಕ್ಯಾಂಟರ್ ಮೇಲೆ ದಾಳಿ ಮಾಡಿದೆ. ಈ ವಾಹನದಲ್ಲಿ ಜಾನುವಾರು ಸಾಗಾಟ ನಡೆಯುತ್ತಿರುವುದರ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ತಂಡ ತಡರಾತ್ರಿ ಕಾದು ಕುಳಿತು ಆಕ್ರಮಣ ನಡೆಸಿದೆ ಎನ್ನಲಾಗಿದೆ.

ಕ್ಯಾಂಟರ್‌ನಲ್ಲಿದ್ದ 16 ಜಾನುವಾರುಗಳನ್ನು ಪುನೀತ್ ಕೆರೆಹಳ್ಳಿ ಮತ್ತು ತಂಡ ತಮ್ಮ ವಶಕ್ಕೆ ಪಡೆಯಿತು. ಇದ್ರಿಸ್ ಪಾಶಾ ಈ ವೇಳೆ ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಈ ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಇದ್ರೀಸ್ ಶವ ಪತ್ತೆಯಾಗಿದ್ದು, ಪುನೀತ್ ಕೆರೆಹಳ್ಳಿ ಮತ್ತು ಅವರ ತಂಡದ ಮೇಲೆ ಕೊಲೆಯ ಅನುಮಾನ ಮೂಡಿಸಿದೆ.

ಎಫ್‌ಐಆರ್ ಪ್ರಕಾರ ಇದ್ರೀಸ್ ಅವರು ಜಾನುವಾರುಗಳನ್ನು ಖರೀದಿಸಿದ ದಾಖಲೆಗಳನ್ನು ತೋರಿಸಿದ್ದರು, ಆದರೆ ಪುನೀತ್ ಅವರನ್ನು ನಿಂದಿಸಿ, ರೂಪಾಯಿ 2 ಲಕ್ಷ ಬೇಡಿಕೆಯಿಟ್ಟ, ದುಡ್ಡು ಕೊಡದೆ ಇದ್ದಲ್ಲಿ ಅವರನ್ನು ಕೊಲ್ಲುವುದಾಗಿಯೂ ಈತ ಹೇಳಿದ್ದ. ಪಾಕಿಸ್ತಾನಕ್ಕೆ ಹೋಗೋ ಎಂದು ಕೂಡ ಹೇಳಿದ್ದ. ನಂತರ ಆತ ಪಾಷಾನನ್ನು ಹಿಂಬಾಲಿಸಿ, ಆತನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಪಾಷಾ ಗಾಯಗೊಂಡು ಸಾವನ್ನಪ್ಪಿದ್ದಾರೆ. ಪಾಷಾ ಅವರ ಜೊತೆಗಿದ್ದ ಇನ್ನೂ ಇಬ್ಬರು ಸಹಚರರು ಗಾಯಗೊಂಡಿದ್ದಾರೆ.

”ಇದ್ರೀಸ್ ಅವರನ್ನು ಪುನೀತ್‌ ಕೆರೆಹಳ್ಳಿ ಹಾಗೂ ಮತ್ತಿತರರೇ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ, ಅವರನ್ನು ಕೂಡಲೇ ಬಂಧಿಸಬೇಕು” ಎಂದು ಆರೋಪಿಸಿ ಅವರ ಕುಟುಂಬಸ್ಥರು ಶನಿವಾರ ಸಾತನೂರು ಪೊಲೀಸ್ ಠಾಣೆ ಮುಂದೆ ಮೃತ ಇದ್ರಿಸ ಅವರ ಶವವನ್ನು ಇಟ್ಟು ಪ್ರತಿಭಟನೆ ನಡೆಸಿದರು.

ಸ್ಥಳಕ್ಕಾಗಮಿಸಿದ ಪೊಲೀಸರು ಆಕ್ರೋಶಗೊಂಡ ಕುಟುಂಬಸ್ಥರನ್ನು ಸಮಾಧಾನ ಹೇಳಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕುಟುಂಬಸ್ಥರ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 302, 341 (ತಪ್ಪಾದ ನಿರ್ಬಂಧ) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *