ನವದೆಹಲಿ: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ತೀರ್ಪು ನೀಡಿದೆ. ಚುನಾವಣೆಯಲ್ಲಿ ಸುಳ್ಳು ಅಫಿಡವಿಟ್ ಸಲ್ಲಿಸುವ ಅಭ್ಯರ್ಥಿಗಳ ವಿರುದ್ಧ ಇನ್ಮುಂದೆ ಸಾಮಾನ್ಯ ಮತದಾರರೇ ನೇರವಾಗಿ ಕ್ರಿಮಿನಲ್ ದೂರು ದಾಖಲಿಸಬಹುದಾಗಿದೆ. ಇದಕ್ಕಾಗಿ ಚುನಾವಣಾ ಆಯೋಗದಿಂದ ಮುಂಚಿತವಾಗಿ ಯಾವುದೇ ರೀತಿಯ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಶೀರ್ಷ ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಶೀಲ್ ನಾಗೂ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶ ಹೊರಡಿಸಿದ್ದು, ಕರ್ನಾಟಕ ಹೈಕೋರ್ಟ್ ನೀಡಿದ್ದ ಹಳೆಯ ತೀರ್ಪನ್ನು ರದ್ದುಗೊಳಿಸಿದೆ. ಅಭ್ಯರ್ಥಿಯ ವಿರುದ್ಧ ಮತದಾರರು ಕೇವಲ 'ಚುನಾವಣಾ ಅರ್ಜಿ' (Election Petition) ಮಾತ್ರ ಸಲ್ಲಿಸಬಹುದು ಮತ್ತು ಖಾಸಗಿಯಾಗಿ ಕ್ರಿಮಿನಲ್ ದೂರು ನೀಡುವ ಹಕ್ಕು ಚುನಾವಣಾ ಆಯೋಗಕ್ಕೆ ಮಾತ್ರ ಇದೆ ಎಂಬ ಹೈಕೋರ್ಟ್ನ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ತಳ್ಳಿಹಾಕಿದೆ.
ಕರ್ನಾಟಕ ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್:
ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 125-A ಕುರಿತು ಸ್ಪಷ್ಟನೆ ನೀಡಿದ ಉನ್ನತ ನ್ಯಾಯಾಲಯವು, ದೇಶದ ಪ್ರತಿಯೊಬ್ಬ ಜಾಗೃತ ಪ್ರಜೆಗೆ ಸುಳ್ಳು ಮಾಹಿತಿಯ ವಿರುದ್ಧ ಕಾನೂನು ಹೋರಾಟ ನಡೆಸುವ ಪೂರ್ಣ ಹಕ್ಕಿದೆ ಎಂದು ಪ್ರತಿಪಾದಿಸಿದೆ.
"ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 125-A ಅಡಿಯಲ್ಲಿ ಅಭ್ಯರ್ಥಿಯು ಸುಳ್ಳು ಅಫಿಡವಿಟ್ ಸಲ್ಲಿಸಿದರೆ, ಯಾವುದೇ ಖಾಸಗಿ ವ್ಯಕ್ತಿ ಅಥವಾ ಮತದಾರರು ನೀಡುವ ಕ್ರಿಮಿನಲ್ ದೂರು ಸಂಪೂರ್ಣವಾಗಿ ಕಾನೂನುಬದ್ಧವಾಗಿರುತ್ತದೆ. ಇದಕ್ಕೆ ಯಾವುದೇ ಸರ್ಕಾರಿ ಇಲಾಖೆ ಅಥವಾ ಚುನಾವಣಾ ಆಯೋಗದ ಅನುಮತಿಯ ಅಗತ್ಯವಿಲ್ಲ." - ಸುಪ್ರೀಂ ಕೋರ್ಟ್
ಅಭ್ಯರ್ಥಿಗಳ ಹೊಣೆಗಾರಿಕೆ ಮತ್ತು ಕಠಿಣ ನಿಯಮ:
ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿಪಾಸ್ತಿ, ಕ್ರಿಮಿನಲ್ ಪ್ರಕರಣಗಳು ಹಾಗೂ ಶೈತ್ರಿಕ ಅರ್ಹತೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡುವುದು ಅಥವಾ ನೈಜ ಅಂಶಗಳನ್ನು ಮುಚ್ಚಿಡುವುದು 'ಜನಪ್ರತಿನಿಧಿ ಕಾಯ್ದೆ'ಯ ಸೆಕ್ಷನ್ 125-A ಅಡಿಯಲ್ಲಿ ಅಪರಾಧವಾಗಿದೆ. ಈವರೆಗೆ ಆಯೋಗದಿಂದ ಅನುಮತಿ ಪಡೆಯುವ ಸಂಕೀರ್ಣ ಪ್ರಕ್ರಿಯೆಯಿಂದಾಗಿ ಹಲವು ನಾಯಕರು ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಸುಪ್ರೀಂ ಕೋರ್ಟ್ನ ಈ ಕ್ರಾಂತಿಕಾರಿ ತೀರ್ಪಿನಿಂದಾಗಿ ಇನ್ಮುಂದೆ ಭ್ರಷ್ಟ ಮತ್ತು ಅಪರಾಧ ಹಿನ್ನೆಲೆಯ ರಾಜಕಾರಣಿಗಳಿಗೆ ತೀವ್ರ ಕಾನೂನು ಸಂಕಷ್ಟ ಎದುರಾಗುವುದು ಖಚಿತವಾಗಿದೆ.