ದೆಹಲಿಯಲ್ಲಿ ನಡೆದ 'ವೋಟ್ ಚೋರಿ' ವಿರೋಧಿ ಪ್ರತಿಭಟನೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ ಸೇಠ್ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಭಾಗವಹಿಸಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಆಗ್ರಹಿಸಿದರು.
NEW DELHI : ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವಂತೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ 'ವೋಟ್ ಚೋರಿ' (Vote Chori) ವಿರೋಧಿ ಪ್ರತಿಭಟನೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ
ಆಸಿಫ್ (ರಾಜು) ಸೇಠ್ ಅವರು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಸಕ್ರಿಯವಾಗಿ ಭಾಗವಹಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಯಕರು, ದೇಶದಲ್ಲಿ ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಯಾವುದೇ ಸೂಕ್ತ ಕಾರಣವಿಲ್ಲದೆ ಅಕ್ರಮವಾಗಿ ವಶಕ್ಕೆ ಪಡೆಯಲಾಗುತ್ತಿದೆ ಎಂದು ಗಂಭೀರ ಆರೋಪಿಸಿದ ನಾಯಕರು, ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮುಂದುವರಿಯಲಿದೆ ಹೋರಾಟ:
ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತಯಂತ್ರಗಳ ಪಾರದರ್ಶಕತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಮತ್ತು ಪ್ರತಿಭಟಿಸಲು ಇರುವ ಸಂವಿಧಾನಬದ್ಧ ಅವಕಾಶಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಉಳಿಸಿಕೊಳ್ಳಲು ತಮ್ಮ ಈ ಹೋರಾಟ ಮುಂದುವರಿಯಲಿದೆ ಎಂದು ಶಾಸಕ ಆಸಿಫ್ ಸೇಠ್ ಸೇರಿದಂತೆ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ. ಮತದಾನದ ಹಕ್ಕಿನ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಧ್ವನಿ ನಿರಂತರವಾಗಿ ಮೊಳಗಲಿದೆ ಎಂದು ಶಾಸಕ ಆಸಿಫ್ ಸೇಠ್ ಪ್ರತಿಕ್ರಿಯಿಸಿದ್ದಾರೆ.