ಕಬ್ಬು ಬೆಳೆಗಾರರ ಹೋರಾಟ ಹಿಂಪಡೆಯುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಮಧ್ಯರಾತ್ರಿ ಸಭೆ ನಡೆದಿದ್ದು, ಇಂದು ಮಧ್ಯಾಹ್ನ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ರೈತರು ತಿಳಿಸಿದ್ದಾರೆ.
ಹುಬ್ಬಳ್ಳಿ: ಕಬ್ಬು ಬೆಳೆಗಾರರು ನಡೆಸುತ್ತಿರುವ ತೀವ್ರ ಹೋರಾಟವನ್ನು ಹಿಂಪಡೆಯುವಂತೆ ಮನವೊಲಿಸಲು ಕೇಂದ್ರ ಸಚಿವ
ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಜನಪ್ರತಿನಿಧಿಗಳು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಧ್ಯರಾತ್ರಿ ರೈತ ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ರೈತ ನಾಯಕರಾದ
ಚೂನಪ್ಪ ಪೂಜಾರಿ,
ಶಶಿಕುಮಾರ್ ಗುರೂಜಿ ಸೇರಿದಂತೆ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಂಸದ
ಜಗದೀಶ್ ಶೆಟ್ಟರ್, ಶಾಸಕರಾದ
ಸಿ.ಸಿ. ಪಾಟೀಲ್,
ಮಹೇಶ್ ಟೆಂಗಿನಕಾಯಿ,
ಎಂ.ಆರ್. ಪಾಟೀಲ್ ಹಾಗೂ ಧಾರವಾಡ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳ ಸಮುಖದಲ್ಲಿ ಈ ಚರ್ಚೆ ನಡೆಯಿತು.
ಸರ್ಕಾರದ ಭರವಸೆ ಮತ್ತು ಸಭೆಯ ವಿವರ:
ರೈತರ ಬೇಡಿಕೆಗಳಿಗೆ ಸ್ಪಂದಿಸಲು ಸರ್ಕಾರ ಸಿದ್ಧವಿದೆ ಎಂದು ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಹಬ್ಬದ ಬಳಿಕ ಸಮಿತಿ ಆಗಮಿಸಿ ವರದಿ ನೀಡಲಿದ್ದು, ಆ ವರದಿ ಬಂದ ನಂತರ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರ ಯಾವತ್ತಿಗೂ ರೈತ ಪರವಾಗಿದೆ. ನಾವು ಅತ್ಯಂತ ಪಾಸಿಟಿವ್ ಆಗಿದ್ದೇವೆ. ಸಭೆಯಲ್ಲಿನ ತೀರ್ಮಾನಕ್ಕೆ ರೈತರು ಸಹಮತ ವ್ಯಕ್ತಪಡಿಸಿದ್ದು, ಹೋರಾಟ ಕೈಬಿಡುವಂತೆ ಮನವಿ ಮಾಡಲಾಗಿದೆ. - ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ
ಇಂದು ಮಧ್ಯಾಹ್ನ ನಿರ್ಧಾರ ಪ್ರಕಟ:
ಸಭೆಯ ಬಳಿಕ ಮಾತನಾಡಿದ ರೈತ ಮುಖಂಡ
ಚೂನಪ್ಪ ಪೂಜಾರಿ, ಜನಪ್ರತಿನಿಧಿಗಳು ಕಾಲಾವಕಾಶ ಕೋರಿದ್ದಾರೆ ಎಂದರು.
ಸಮಿತಿ ವರದಿ ಕೊಟ್ಟ ನಂತರ ಎಂಎಸ್‌ಪಿ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಪಾದಯಾತ್ರೆ ಕೈಬಿಡಬೇಕೋ ಅಥವಾ ಮುಂದುವರೆಸಬೇಕೋ ಎಂಬ ಬಗ್ಗೆ ಚರ್ಚೆ ನಡೆಸಿ, ಸೋಮವಾರ ಮಧ್ಯಾಹ್ನ ನಮ್ಮ ಅಂತಿಮ ತೀರ್ಮಾನವನ್ನು ಪ್ರಕಟಿಸುತ್ತೇವೆ. - ಚೂನಪ್ಪ ಪೂಜಾರಿ, ರೈತ ಮುಖಂಡ