September 8, 2024

ನವಲಗುಂದ : ಪಟ್ಟಣದ ಮೂಲಕ ಹಾದು ಹೋಗುವ ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಭಜಕ ತೀವ್ರತರ ಹಾಳಾಗಿದ್ದು ವಾಹನ ಸವಾರರು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿನ ಲಾಲ್ಗುಡಿ ದೇವಸ್ಥಾನ ಸಮೀಪ ಇರುವ ರಸ್ತೆ ವಿಭಜಕ ಸಂಪೂರ್ಣ ಕೆಟ್ಟಿದ್ದು,ರಾತ್ರಿ ವೇಳೆ ರಭಸದಿಂದ ಬರುವ ವಾಹನಗಳು ವಿಭಜಕ ಗಮನಿಸದೆ ಹಲವು ಅಫಘಾತಗಳು ನಡೆದಿವೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

ಸುಗಮ ಸಂಚಾರಕ್ಕೆ ಅನುಕೂಲ ಆಗುವ ಉದ್ದೇಶದಿಂದ ಅಳವಡಿಸಿರುವ ರಸ್ತೆ ವಿಭಜಕ ಅಪಾಯಕಾರಿ ಅನಾಹುತಗಳನ್ನು ಆಹ್ವಾನಿಸುವ ಹೆದ್ದಾರಿ ಯಂತಾಗಿದೆ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಮತ್ತು ಬೆಳಗಿನ ಜಾವದಲ್ಲಿ ಈ ವಿಭಜಕ ಸಾವನ್ನು ಹೊತ್ತು ತರುವುದು ಇದುವರೆಗೂ ನಡೆದಿರುವ ಅಪಘಾತಗಳಿಂದ ಸಾಬೀತಾಗಿದೆ. ಮಳೆ ಸುರಿಯುವಾಗ, ಮಂಜು ಕವಿದಿರುವಾಗ ಈ ವಿಭಜಕ ಗೋಚರಿಸುವುದೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಅವೈಜ್ಞಾನಿಕ ವಿಭಜಕಗಳ ಅಳವಡಿಕೆ ಮತ್ತು ವಿಭಜಕಗಳನ್ನು ಅಳವಡಿಸಿದ ಬಗ್ಗೆ ಸೂಕ್ತ ಸೂಚನಾ ಫಲಕಗಳನ್ನು ಹಾಕದಿರುವುದು ಹಾಗೂ ವಿಭಜಕಗಳು ಸ್ಪಷ್ಟವಾಗಿ ಗೋಚರಿಸುವಂತೆ ಬೆಳಕಿನ ವ್ಯವಸ್ಥೆ ಮಾಡದಿರುವುದು ಆಗಿದೆ.

ಪಟ್ಟಣ ಪ್ರವೇಶಿಸುವ ಹಲವು ವಾಹನಗಳು ರಾತ್ರಿ ವೇಳೆಯಲ್ಲಿ ವಾಹನ ಚಾಲಕರು ಕಣ್ಣಿಗೆ ದೂರದಿಂದಲೇ ರಸ್ತೆ ವಿಭಜಕ ಗೋಚರಿಸದೆ ವಿಭಜಕಕ್ಕೆ ಡಿಕ್ಕಿ ಹೊಡೆದು ವಾಹನ ಜಖಂಗೊಂಡ ಹಲವು ನಿದರ್ಶನಗಳು ಇತ್ತೀಚಿನ ದಿನಗಳಲ್ಲಿ ಕಂಡು ಬಂದಿವೆ. ಸವಾರರು ಸಣ್ಣ ಪುಟ್ಟ ಗಾಯಗಳಿಂದ ತೊಂದರೆ ಅನುಭವಿಸಿದ್ದಾರೆ. ಆದ್ದರಿಂದ ಇಲ್ಲಿನ ವಿಭಜಕಕ್ಕೆ ಸರಿಯಾಗಿ ಗೋಚರಿಸುವ ಹಾಗೆ ಸೈನ್ ಬೋರ್ಡ್ ಅಥವಾ ರೆಡಿಯಂ ಸೈನ್ ಬೋರ್ಡ್ ಗಳನ್ನು ಅಳವಡಿಸಿ ಮುಂಬರುವ ಅಪಘಾತಗಳನ್ನು ತಪ್ಪಿಸಬೇಕೆಂದು ಸಾರ್ವಜನಿಕರ ಆಗ್ರಹ ವಾಗಿದೆ .

ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡೇ ಪೆಟ್ರೋಲ್ ಡೀಸೆಲ್ ಬಂಕ್ ಗಳು, ವಸತಿಗೃಹಗಳು, ಶಾಲಾ ಕಾಲೇಜುಗಳು ಮಾರ್ಗಗಳು ಇರುವುದರಿಂದ ಪ್ರತಿನಿತ್ಯ ಈ ಹೆದ್ದಾರಿ ಜನಸಂದಣಿಯಿಂದ ಕೂಡಿರುವುತ್ತದೆ. ಅದಕ್ಕಾಗಿ. ಹಲವು ದಿನಗಳಿಂದ ಈ ಸಮಸ್ಯೆ ಉದ್ಭವ ಇರುವುದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮೌಖಿಕ ಮನವಿ ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಆದ್ದರಿಂದ 2-3 ದಿನಗಳಲ್ಲಿ ಅವೈಜ್ಞಾನಿಕ ವಾಗಿ ಮಾರ್ಪಾಡು ಗೊಂಡಿರುವ ರಸ್ತೆ ವಿಭಜಕವನ್ನು ತೆರವು ಗೋಳಿಸಿ ಸೂಕ್ತ ರೀತಿಯ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ನಿಂಗಪ್ಪ ಭೋವಿ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *