ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ಸಲ್ಲಿಸಿರುವ ಆರೋಪದ ಮೇಲೆ ಹಾಸನ ಮತ್ತು ದಾವಣಗೆರೆ ಸಂಸದರ ಸಿಂಧುತ್ವವನ್ನು ರದ್ದುಪಡಿಸಬೇಕೆಂದು ಕೋರಿ ಹೈಕೋರ್ಟ ನಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿದೆ. ಪ್ರತ್ಯೇಕವಾಗಿ ಸಲ್ಲಿಸಲಾಗಿರುವ ಈ ಅರ್ಜಿಯಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್ ಮತ್ತು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರ ನೇಮಕವನ್ನು ಅಸಿಂಧುಗೊಳಿಸಲು ಕೋರಲಾಗಿದೆ.
ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ ಅವರ ಪುತ್ರ ಡಿ. ಚರಣ್ ಸಂಸದ ಶ್ರೇಯಸ್ ಪಟೇಲ್ ವಿರುದ್ದ ಅರ್ಜಿ ಸಲ್ಲಿಸಿದ್ದಾರೆ. ಸಂಸದ ಶ್ರೇಯಸ್ ಪಟೇಲ್ ಕಳೆದ ಐದು ವರ್ಷದ ಆದಾಯ ತೆರಿಗೆ ವಿವರ ಉಲ್ಲೇಖಿಸಿಲ್ಲ. ಜೊತೆಗೆ ಚುನಾವಣಾ ವೆಚ್ಚದ ವಿವರವನ್ನೂ ಸಹ ಮರೆಮಾಚಿದ್ದಾರೆಂದು ಆರೋಪಿಸಲಾಗಿದೆ.
ದಾವಣಗೆರೆಯಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ ವಿರುದ್ದ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಕರಾರು ಅರ್ಜಿ ಸಲ್ಲಿಸಿದ್ದು, ಮತದಾರರಿಗೆ ಆಮಿಷ ಒಡ್ಡಿರುವ ಆರೋಪ ಮಾಡಲಾಗಿದೆ. ಮಹಿಳೆಯರಿಗೆ ಒಂದು ಲಕ್ಷ ರೂ. ಹಣ ನೀಡುತ್ತೇನೆಂದು ಪ್ರಭಾ ಮಲ್ಲಿಕಾರ್ಜುನ ಆಮಿಷ ಒಡ್ಡಿದ್ದಾರೆ. ಇದು ಪ್ರಜಾ ಪ್ರತಿನಿಧಿ ಕಾಯ್ದೆ ನಿಯಮಕ್ಕೆ ವಿರುದ್ದವಾಗಿದೆ ಎಂದು ಗಾಯತ್ರಿ ಸಿದ್ದೇಶ್ವರ ದೂರಿದ್ದಾರೆ.