ಸಂವಿಧಾನದ ವಿಧಿ 341ರ ಅಡಿ ಪ್ರಕಟಿಸಲಾದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆ ಮಾಡುವ ಅಧಿಕಾರ ರಾಜ್ಯ ಸರ್ಕಾರ ಅಥವಾ ಯಾವುದೇ ಪ್ರಾಧಿಕಾರಕ್ಕಿಲ್ಲ. ಈ ಅಧಿಕಾರ ಸಂಸತ್ತಿಗೆ ಮಾತ್ರ ಇರುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪರಿಶಿಷ್ಟ ಜಾತಿಗಳ ಪಟ್ಟಿಗೆ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಜಾತಿಯನ್ನು ಸೇರ್ಪಡೆ ಮಾಡಿದ್ದ ಬಿಹಾರ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಡಾ. ಭೀಮ್ ರಾವ್ ಅಂಬೇಡ್ಕರ್ ವಿಚಾರ್ ಮಂಚ್ ಬಿಹಾರ್ ಸಂಘಟನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್ ನಾಥ್ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ತಾಂತ್ವಿ/ತಂತ್ವಾ ಸಮುದಾಯವನ್ನು ಎಸ್ಸಿ ಜಾತಿಗಳ ಪಟ್ಟಿಯಲ್ಲಿ ಬರುವ ಪಾನ್/ಸವಾಸಿ ಜಾತಿಯೊಂದಿಗೆ ವಿಲೀನಗೊಳಿಸುವ ಮೂಲಕ ರಾಜ್ಯ ಸರ್ಕಾರ ಎಸ್ಸಿ ಸಮುದಾಯವನ್ನು ವಂಚಿಸುವ ಪ್ರಯತ್ನಮಾಡಿದೆ.
ಇದೊಂದು ಗಂಭೀರ ವಿಚಾರವಾಗಿದ್ದು, ರಾಜ್ಯದ ದೃಷ್ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಬಿಹಾರ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದೆ