ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ
ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ಮಂಗಳವಾರ ನಡೆದ ಸಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರುಗಳ ಮಧ್ಯೆ ವಿವಿಧ ವಿಷಯಗಳ ಚರ್ಚೆ ಸಂದರ್ಭದಲ್ಲಿ ವಾಗ್ವಾದ ನಡೆದು, ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಹಿಂದಿನ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಕುರಿತು ಸಭಾ ನಡುವಳಿ ಓದುವ ಸಂದರ್ಭದಲ್ಲಿಯೇ ಪುರಸಭೆಯಿಂದ ಬಡವರಿಗೆ ಒದಗಿಸುವ ಸೋಲಾರ ಹಂಚಿಕೆ ಪಟ್ಟಿಯಲ್ಲಿ ಕಾಂಗ್ರೆಸ್ ಸದಸ್ಯರುಗಳ ವಾರ್ಡನವರನ್ನು ಕಡೆಗಣಿಸಲಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರ ವಾರ್ಡಗಳಲ್ಲಿ ಬಡವರು ಇಲ್ಲವೆ ಎಂದು ಪ್ರಶ್ನಿಸಿದ ಸದಸ್ಯೆ ರಾಜೇಶ್ವರಿ ಮೆಟಗುಡ್ಡ, ಅರ್ಜಿ ಆಹ್ವಾನ ಸೇರಿದಂತೆ ಸಂಪೂರ್ಣ ವಿವರ ಸಲ್ಲಿಸುವಂತೆ ಆಗ್ರಹಿಸಿದರು.
ಅದರ ಮಧ್ಯದಲ್ಲಿಯೇ ಸಭೆಯ ಅಧ್ಯಕ್ಷತೆ ವಹಿಸಿದ ಪುರಸಭೆ ಅಧ್ಯಕ್ಷರು ವಿವಿಧ ವಿಷಯಗಳ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಕೇವಲ ಉಪಾಧ್ಯಕ್ಷರು ಮಾತ್ರ ಮಾತನಾಡುವುದು ಸರಿಯಲ್ಲ ಎಂದು ಕೆಲವು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಕೆಲಕಾಲ ಗೊಂದಲದ ವಾತಾವರಣ ಸೃಷ್ಠಿಯಾಯಿತು.
ಪಟ್ಟಣದ ಪುರಸಭೆಯ ವಿವಿಧ ವಾರ್ಡಗಳ ಉದ್ಯಾನಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗೆ ನೀಡುವಂತೆ ಕೆಲವು ಸದಸ್ಯರು ಆಗ್ರಹಿಸಿದರು. ಸರಕಾರದ ನಿಯಮಾವಳಿ ಪ್ರಕಾರ ಗಾರ್ಡನ್ ಜಾಗೆ ನೀಡಲು ಬರುವುದಿಲ್ಲ ಎಂದು ಮುಖ್ಯಾಧಿಕಾರಿಗಳು ಹಾಗೂ ಅಧಿಕಾರಿಗಳು ಹೇಳುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಉಪಾಧ್ಯಕ್ಷ ನಾಗರಾಜ ಕಟ್ಟಿಮನಿ ಮಹಾಂತೇಶ ನಗರದಲ್ಲಿ ಗಾರ್ಡನ್ ಜಾಗೆಯಲ್ಲಿ ಕುಡಿಯುವ ನೀರಿನ ಆರ್‌ಓ ಪ್ಲಾಂಟ್ ಹೇಗೆ ನೀಡಿದ್ದೀರಿ? ಕೇವಲ ಶಾಸಕರು ಸಂಸದರು ಹೇಳಿದ ಕೆಲಸ ಮಾಡಿದರೇ ಸದಸ್ಯರಿಗೆ ಕಿಮ್ಮತ್ತು ಇಲ್ಲವೆ ಎಂದು ಅಭಿಯಂತರರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನೀಯರ ನದಾಫ್ ಆರ್‌ಓ ಪ್ಲಾಂಟ್‌ಗೆ ಕೇವಲ 14 ವರ್ಷದ ಲೀಜ್ ಆಧಾರದ ಮೇಲೆ ನೀಡಲಾಗಿದೆ. 14 ವರ್ಷ ಮುಗಿದ ನಂತರ ಅದನ್ನು ಪುರಸಭೆಗೆ ಸಂಬಂಧಪಟ್ಟ ಏಜೆನ್ಸಿ ಬಿಟ್ಟುಕೊಡಬೇಕು ಎಂದು ತಿಳಿಸಿದರು.
ಪುರಸಭೆ ಖರ್ಚು ವೆಚ್ಚ, ವಿದ್ಯಾಚೇತನ ಶಾಲೆಗೆ ಡೆಸ್ಕ ಒದಗಿಸುವುದು. ಪುರಸಭೆ ಕಾರ್ಮಿಕರ ಆರೋಗ್ಯ ತಪಾಸಣೆ ಬಿಲ್ ಸಂದಾಯ, ಎಸ್‌ಎಫ್‌ಸಿ ನಿಧಿಯಿಂದ ಸ್ಕಾಲರ್‌ಶೀಪ್ ನೀಡುವುದು ಸೇರಿದಂತೆ ವಿವಿಧ ವಿಷಗಳ ಕುರಿತು ಚರ್ಚಿಸಲಾಯಿತು.
ಪುರಸಭೆ ಅಧ್ಯಕ್ಷ ರಘುನಾಥ ರೇಣಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗರಾಜ ಕಟ್ಟಿಮನಿ, ಮುಖ್ಯಾಧಿಕಾರಿ ರವಿ ಬಾಗಲಕೋಟ ಸೇರಿದಂತೆ ಸರ್ವಸದಸ್ಯರು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು