ಚಾಮರಾಜನಗರ: ಸಿಎಂಗೆ ಸಲ್ಲಿಸಲಾಗಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾಗಿವೆ. ಹೌದು ರೈತರಿಂದ ಬಂದಿದ್ದ ಮನವಿ ಪತ್ರಗಳಾಗಿದ್ದು, ಅವುಗಳು ಕಸದ ರಾಶಿಯಲ್ಲಿ ಸಿಕ್ಕಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಸಿದ್ದರಾಮಯ್ಯನವರು ಚಾಮರಾಜನಗರಕ್ಕೆ ಬಂದಿದ್ದು, ಅಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಮತದಾರರ ಕೃತಜ್ಞತಾ ಸಮಾರಂಭಕ್ಕೆ. ಆ ಸಮಾರಂಭದಲ್ಲಿ ಮಾತನಾಡಿದ್ದ ಅವರು, ತಮ್ಮ ಹಾಗೂ ವರುಣಾ ಕ್ಷೇತ್ರದ ಮತದಾರರ ನಂಟು 40 ವರ್ಷದ್ದು ಎಂದು ಭಾಷಣ ಮಾಡಿದ್ದರು. ಅಲ್ಲದೆ, ತಮ್ಮ ರಾಜಕೀಯದ ಏಳುಬೀಳುಗಳನ್ನು ನೆನಪಿಸಿಕೊಂಡು ತಮ್ಮನ್ನು ಬೆಳೆಸಿದ ಅಲ್ಲಿನ ಮತದಾರರಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದರು.
ಅದೇ ವೇಳೆ, ನಾನಾ ರೈತರು ಹಾಗೂ ಕೊರೊನಾ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸರಬರಾಜು ಕೊರತೆಯಾಗಿ ಸಾವಿಗೀಡಾಗಿದ್ದ ಹಲವಾರು ರೋಗಿಗಳು ಸಂಬಂಧಿಕರು ಸೂಕ್ತ ಪರಿಹಾರಕ್ಕಾಗಿ ಮನವಿಗಳನ್ನು ಸಲ್ಲಿಸಿದ್ದರು. ಅದೆಲ್ಲವನ್ನೂ ಸಿದ್ದರಾಮಯ್ಯ ಸ್ವೀಕರಿಸಿದ್ದರು. ಅವೇ ಮನವಿ ಪತ್ರಗಳೇ ಈಗ ಕಸದ ರಾಶಿಯಲ್ಲಿ ಸಿಕ್ಕಿದ್ದು, ಅವು ಸಿಎಂ ಕಾರ್ಯಕ್ರಮ ನಡೆದಿದ್ದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಒಟ್ಟುಮಾಡಲಾಗಿರುವ ಕಸದ ರಾಶಿಯಲ್ಲಿ ಸಿಕ್ಕಿವೆ ಎಂದು ಹೇಳಲಾಗಿದೆ.