ತನಿಖೆ ಮುಂದುವರಿದಂತೆಲ್ಲ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಹೊಸ ಹೊಸ ಮಾಹಿತಿಗಳು ಲಭ್ಯವಾಗುತ್ತಿವೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18ರ ತನಕ ವಿಸ್ತರಣೆ ಮಾಡಲಾಗಿದೆ. ಈ ಕೇಸ್ನಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಎಲ್ಲ ಆರೋಪಿಗಳಿಗೆ ಯಾಕೆ ಜಾಮೀನು ನೀಡಬಾರದು ಎಂಬುದಕ್ಕೆ ಪೊಲೀಸರು ಕೆಲವು ಮುಖ್ಯವಾದ ಕಾರಣಗಳನ್ನು ಕೋರ್ಟ್ಗೆ ನೀಡಿದ್ದಾರೆ.
ಪ್ರಕರಣದ ಎ1ರಿಂದ ಎ17 ಆರೋಪಿಗಳು ಕೊಲೆ ಮತ್ತು ಸಾಕ್ಷಿನಾಶಪಡಿಸಿದಂತೆ ಒಂದು ಗಂಭೀರ ಪ್ರಕರಣದಲ್ಲಿ ಭಾಗಿಯಾಗಿ ಕೃತ್ಯವೆಸಗಿದ್ದು ಇವರಿಗೆ ಕಾನೂನಿನ ಮೇಲೆ ಕಿಂಚಿತ್ತೂ ಗೌರವ ಇಲ್ಲದೇ ಇರುವುದು ಈವರೆಗಿನ ಸಾಕ್ಷ್ಯಾಧಾರಗಳಿಂದ ದೃಢಪಟ್ಟಿರುತ್ತದೆ.
2) ಎಲ್ಲಾ ಎ1ರಿಂದ ಎ17 ಆರೋಪಿಗಳು ಸಮಾನ ಉದ್ದೇಶದಿಂದ ಕೃತ್ಯ ಎಸಗಲು ಒಳಸಂಚು ರೂಪಿಸಿರುವುದು ಮತ್ತು ಕೃತ್ಯ ನಡೆದ ನಂತರ ಭೌತಿಕ, ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯಗಳನ್ನು ಈಗಾಗಲೇ ನಾಶಪಡಿಸಿರುವುದು ಮತ್ತು ನಾಶಪಡಿಸಲು ಪ್ರಯತ್ನಿಸಿರುವುದು ತನಿಖೆಯಲ್ಲಿ ದೃಢಪಟ್ಟಿರುತ್ತದೆ.
3) ಪ್ರಕರಣದ ತನಿಖಾ ಕಾಲದಲ್ಲಿ ಅಮಾನತ್ತುಪಡಿಸಿಕೊಂಡು ಪರಿಶೀಲಿಸಲಾದ ತಾಂತ್ರಿಕ ಸಾಕ್ಷ್ಯಾಧಾರಗಳಲ್ಲಿ ಎಲ್ಲಾ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು ಇನ್ನೂ ಹಲವಾರು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಪರಿಶೀಲನೆಗೆ ಕಳುಹಿಸಿದ್ದು ವರದಿ ಸಂಗ್ರಹಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಬೇಕಾಗಿರುತ್ತದೆ.
4) ಪ್ರಕರಣವು ಹಾಲಿ ತನಿಖೆಯಲ್ಲಿದ್ದು ಪ್ರಕರಣದಲ್ಲಿ ಎಲ್ಲಾ ಆರೋಪಿಗಳ ಕೃತ್ಯದಲ್ಲಿನ ಅವರ ಸಂಪೂರ್ಣ ಪಾತ್ರದ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಯಬೇಕಾಗಿದ್ದು ಈ ಬಗ್ಗೆ ತನಿಖೆ ಮುಂದುವರೆದಿರುತ್ತದೆ.
5) ಪ್ರಕರಣದಲ್ಲಿ ಈವರೆಗೆ 83.65.500/- ರೂಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದು ಸದರಿ ಹಣವನ್ನು ಆರೋಪಿಗಳಿಗೆ ನೀಡಿರುವ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆಗಳನ್ನು ಪಡೆದುಕೊಳ್ಳಬೇಕಾಗಿರುತ್ತದೆ ಹಾಗೂ ಹಣದ ಮೂಲದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕಾಗಿರುತ್ತದೆ.
6) ಪ್ರತ್ಯೇಕ್ಷ ಸಾಕ್ಷಿದಾರರಿಂದ ಎ15 ಹಾಗೂ ಎ17 ಆರೋಪಿಗಳು ಸೇರಿದಂತೆ ಇತರೆ ಆರೋಪಿಗಳ ಗುರುತಿನ ಕವಾಯತನ್ನು ಕಾರ್ಯನಿರ್ವಾಹಕ ದಂಡಾಧಿಕಾರಿಗಳಿಂದ ನಡೆಸಬೇಕಾಗಿರುತ್ತದೆ. ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದಲ್ಲಿ ಪ್ರಕರಣದ ತನಿಖೆಗೆ ಆಡಚಣೆ ಉಂಟಾಗುತ್ತದೆ.
7) ಪ್ರಕರಣದಲ್ಲಿ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ್ದ ಹಾಗೂ ಸಾಕ್ಷ್ಯ ನಾಶಕ್ಕೆ ಉಪಯೋಗಿಸಿದ್ದ ಮತ್ತು ಮೃತದೇಹವನ್ನು ವಿಲೇವಾರಿ ಮಾಡಲು ಉಪಯೋಗಿಸಿದ್ದ ವಾಹನಗಳನ್ನು ಆರ್.ಟಿ.ಓ ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಿ ಪರಿಶೀಲನಾ ವರದಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಹಾಗೂ ವಾಹನ ಮಾಲೀಕರುಗಳ ವಿವರಗಳನ್ನು ಪಡೆದುಕೊಂಡು ಮೂಲ ಮಾಲೀಕರುಗಳ ಹೇಳಿಕೆಗಳನ್ನು ಪಡೆದುಕೊಳ್ಳಬೇಕಾಗಿರುತ್ತದೆ.
ಪ್ರಕರಣದಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಮೊಬೈಲ್ಗಳನ್ನು ರಿಟ್ರೇವ್ ಮಾಡಿಸಿ ಸಿ.ಎಪ್.ಎಸ್.ಎಲ್. ಹೈದ್ರಾಬಾದ್ಗೆ ಕಳುಹಿಸಿಕೊಟ್ಟಿದ್ದು ವರದಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.
9) ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳ ಹಾಗೂ ಸಾಕ್ಷಿದಾರರುಗಳ ಮೊಬೈಲ್ ಫೋನ್ಗಳನ್ನು ರಿಟ್ರೇವ್ ಮಾಡಿಸಿ ಪರೀಕ್ಷೆಗಾಗಿ ಸಿ.ಎಫ್.ಎಸ್.ಎಲ್ಗೆ ಕಳುಹಿಸಿಕೊಟ್ಟು ವರದಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.
10) ಪ್ರಕರಣದಲ್ಲಿ ಅಮಾನತ್ತು ಪಡಿಸಿದ್ದ ಡಿ.ವಿ.ಆರ್ಗಳನ್ನು ರಿಟ್ರೇವ್ ಮಾಡಿಸಿ ನಂತರ ಆರೋಪಿಗಳ ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಿ ಎಫ್.ಎಸ್.ಎಲ್ಗೆ ಕಳುಹಿಸಿ ವರದಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.
11) ಪ್ರಕರಣದಲ್ಲಿ ಆರೋಪಿಗಳು ಕೃತ್ಯಕ್ಕೆ ಮೊದಲು ಹಾಗೂ ಕೃತ್ಯದ ಸಮಯದಲ್ಲಿ ಹಾಗೂ ಕೃತ್ಯದ ನಂತರ ಹಲವಾರು ವ್ಯಕ್ತಿಗಳನ್ನು ಸಂಪರ್ಕಿಸಿದ್ದು ಸದರಿ ಸಾಕ್ಷಿದಾರರುಗಳನ್ನು ವಿಚಾರಣೆ ಮಾಡಿ ಸಾಕ್ಷ್ಯ ನಾಶದ ಬಗ್ಗೆ ಹೇಳಿಕೆಗಳನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಈ ಸಮಯದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದಲ್ಲಿ ಸಾಕ್ಷ್ಯ, ನಾಶ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.