September 19, 2024

ಬೆಂಗಳೂರು: ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ರಕ್ಷಣೆ ಮಾಡಿದ ಸಂತ್ರಸ್ತ ಮಹಿಳೆ ವಿರುದ್ಧ ಅನೈತಿಕ ಸಂಚಾರ ತಡೆ ಕಾಯ್ದೆ ಅಪರಾಧಕ್ಕಾಗಿ ವಿಚಾರಣೆಗೆ ಗುರಿಪಡಿಸಲಾಗದು ಎಂದು ಹೈಕೋರ್ಟ್ ತೀರ್ಪು ನೀಡಿದೆ. ತಮ್ಮ ವಿರುದ್ಧ ಅನೈತಿಕ ಸಂಚಾರ ತಡೆ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಂತ್ರಸ್ತ ಮಹಿಳೆ (ಪ್ರಕರಣದ 8ನೇ ಆರೋಪಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ಅನೈತಿಕ ಸಂಚಾರ ತಡೆ ಕಾಯ್ದೆಯ ಉದ್ದೇಶ ವೇಶ್ಯಾವಾಟಿಕೆಯನ್ನು ಅಥವಾ ವೇಶ್ಯಯರನ್ನು ನಿರ್ಮೂಲನೆ ಮಾಡುವುದಲ್ಲ. ಕಾನೂನಿನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಸಂತ್ರಸ್ತೆಯರಿಗೆ ದಂಡ ವಿಧಿಸುವ ನಿಯಮಗಳೂ ಇಲ್ಲ. ಬದಲಿಗೆ ವಾಣಿಜ್ಯ ಉದ್ದೇಶಗಳಿಗೆ ಲೈಂಗಿಕ ಶೋಷಣೆ ನಡೆಸುವುವರನ್ನು, ವೇಶ್ಯಾವಾಟಿಕೆಯಲ್ಲಿ ಮಹಿಳೆಯರನ್ನು ತೊಡಗಿಸಿ ಅದರಿಂದ ಹಣ ಗಳಿಸುವವರನ್ನು ಹಾಗೂ ಅಂತಹ ಸಂಪಾದನೆಯ ಮೇಲೆ ಜೀವನ ನಡೆಸುವವರನ್ನು ಶಿಕ್ಷಿಸಲು ಈ ಕಾಯ್ದೆ ಜಾರಿಗೆ ತರಲಾಗಿದೆ.” ಎಂದು ವಿವರಿಸಿದೆ.

ಅಲ್ಲದೇ, ಅರ್ಜಿದಾರ ಮಹಿಳೆ ಪ್ರಕರಣದ ಸಂತ್ರಸ್ತೆ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಹಾಗೆಯೇ ಕಾನೂನಿನಲ್ಲಿ ಸಂತ್ರಸ್ತೆಯ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಿಲ್ಲ. ಸಂತ್ರಸ್ತೆಯ ವಿರುದ್ಧ ಪೊಲೀಸರು ಕಾಯ್ದೆಯ ಸೆಕ್ಷನ್ 5 ರ ಅಡಿಯಲ್ಲಿ ಎಫ್‌ಐಆ‌ರ್ ದಾಖಲಿಸಿದ್ದಾರೆ. ಸೆಕ್ಷನ್ 5 ರ ನಿಯಮವು “ವೇಶ್ಯಾವಾಟಿಕೆಗಾಗಿ ಮಹಿಳೆಯರನ್ನು ಕೂಡಿಡುವುದು,

ಪ್ರೇರೇಪಿಸುವುದು ಅಥವಾ ಕರೆದೊಯ್ಯುವುದನ್ನು” ಶಿಕ್ಷಾರ್ಹ ಅಪರಾಧವಾಗಿಸುತ್ತದೆ. ಎಲ್ಲಿಯೂ ಸಂತ್ರಸ್ತ ಮಹಿಳೆಗೆ ಶಿಕ್ಷಿಸುವ ಕುರಿತು ಹೇಳುವುದಿಲ್ಲ. ಹೀಗಿದ್ದಾಗ ಪ್ರಕರಣವನ್ನು ಸಂತ್ರಸ್ತೆಯ ವಿರುದ್ಧ ಮುಂದುವರೆಯಲು ಬಿಟ್ಟರೆ ಕಾನೂನಿನ ದುರುಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರ ಮಹಿಳೆಯ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಿ ಆದೇಶಿಸಿದೆ.

Leave a Reply

Your email address will not be published. Required fields are marked *