ಹುಬ್ಬಳ್ಳಿ: ವಿಶ್ವ ತಂದೆಯ ದಿನ ಅಂಗವಾಗಿ 50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶ್ರೀ ಬಾಲಾಜಿ ನರರೋಗ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ವತಿಯಿಂದ ಎಲುಬು ಮತ್ತು ನರ ರೋಗಗಳಿಗೆ ಸಂಬಂಧಿಸಿದಂತೆ ರವಿವಾರ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯರು, ವಯಸ್ಸಾದಂತೆ ಮನುಷ್ಯನಲ್ಲಿನ ರೋಗ ನಿರೋಧಕ ಶಕ್ತಿ ಕುಂಠಿತವಾಗಲಿದ್ದು, ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಹಿರಿಯರು ತಮ್ಮ ವಯಸ್ಸಿಗೆ ಅನುಗುಣವಾಗಿ ಪೌಷ್ಠಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮ, ನಡಿಗೆ ಇತ್ಯಾದಿ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಅನೇಕ ಜನರು ತಪಾಸಣೆಗೊಳಪಟ್ಟರು. ಭಾಗವಹಿಸಿದ್ದವರ ಬಿಪಿ, ಶುಗರ್, ದೇಹತೂಕ ಪರಿಶೀಲನೆ ಮಾಡಿ, ಎಲುಬು ಮತ್ತು ನರರೋಗಗಳಿಗೆ ಸಂಬಂಧಿಸಿದಂತೆ ತಪಾಸಣೆ ಮಾಡಿ ಆರೋಗ್ಯದ ಬಗ್ಗೆ ಕೆಲ ಟಿಪ್ಸ್ ನೀಡಲಾಯಿತು. ಆಸ್ಪತ್ರೆ ವೈದ್ಯರಾದ ಡಾ. ಅಭಯಾಂಬಿಕಾ, ಡಾ. ಅಖಿಲೇಶ ಜೋಶಿ, ಶುಶ್ರೂಷಕ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.