September 8, 2024

ಬೆಂಗಳೂರು ;ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕ್ರೀಡಾ, ಯುವಜನ ಸಬಲೀಕರಣ ಪರಿಶಿಷ್ಟ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ಕುತ್ತು ಬಂದಿದ್ದು, ಅವರ ತಲೆದಂಡವಾಗುವುದು ನಿಶ್ಚಿತವಾಗಿದೆ.

ಯಾವುದೇ ಬ್ಯಾಂಕಿನಲ್ಲಿ ೧೦ ಕೋಟಿಗೂ ಹೆಚ್ಚಿನ ಅವ್ಯವಹಾರ ಇದ್ದರೆ ಆ ಕುರಿತು ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇದ್ದು, ಯೂನಿಯನ್ ಬ್ಯಾಂಕ್‌ನ ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ನಡೆಸುವಂತೆ ಯೂನಿಯನ್ ಬ್ಯಾಂಕ್‌ನ ಮುಖ್ಯಸ್ಥರು ಸಿಬಿಐಗೆ ಪತ್ರ ಬರೆದಿದ್ದಾರೆ. ಹಾಗಾಗಿ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಲಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ನಾಗೇಂದ್ರ ಅವರಿಗೆ ಸಿಬಿಐ ತನಿಖೆ ಆರಂಭವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆರಂಭವಾಗುತ್ತಿದ್ದಂತೆಯೇ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡುವುದು ಬಹುತೇಕ ನಿಶ್ಚಿತ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಹಾಗೂ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ರಾಜ್ಯಸರ್ಕಾರ ಆದೇಶಿಸಿತ್ತು. ಹಾಗೆಯೇ ಬಿ. ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ಕುತ್ತು ಬರದಂತೆ ನೋಡಿಕೊಳ್ಳುವ ತಂತ್ರವನ್ನು ಹೆಣೆಯಲಾಗಿತ್ತಾದರೂ ಈ ಪ್ರಕರಣ ಈಗ ಸಿಬಿಐ ಅಂಗಳಕ್ಕೆ ಹೋಗಿರುವುದರಿಂದ ನಾಗೇಂದ್ರ ಅವರ ತಲೆದಂಡ ಅನಿವಾರ್ಯ ಎಂಬಂತಾಗಿದೆ. ಹಾಗಾಗಿ, ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದ ನಿಶ್ಚಿತ.
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಯೂನಿಯನ್‌ಬ್ಯಾಂಕ್ ಸಹ ಕ್ರಮಕೈಗೊಂಡಿದ್ದು, ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಹಾಗೆಯೇ ಸಿಬಿಐ ತನಿಖೆ ನಡೆಸುವಂತೆಯೂ ಯೂನಿಯನ್‌ಬ್ಯಾಂಕ್ ಕೋರಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಯೂ ಆರಂಭವಾಗಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಒಂದೆರೆಡೆ ದಿನಗಳಲ್ಲಿ ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದ್ದು, ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡುವರು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *