ಮಂಗಳೂರು: ಸುರತ್ಕಲ್ ನ ಕುಳಾಯಿ ಆರೋನ್ ವೈನ್ಸ್ ಬಳಿ ರೌಡಿ ಶೀಟರ್ ಭರತ್ ಶೆಟ್ಟಿ ಎಂಬಾತನ ಮೇಲೆ ನಿನ್ನೆ ರಾತ್ರಿ ಸುಮಾರು 8.30ರ ಸುಮಾರಿಗೆ ತಲವಾರು ದಾಳಿ ನಡೆದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುರತ್ಕಲ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಭರತ್ ಶೆಟ್ಟಿ ನೀಡಿರುವ ದೂರಿನ ಪ್ರಕಾರ ದೀಕ್ಷಿತ್ ಶೆಟ್ಟಿ ಕೈಕಂಬ, ಶೈಲೇಶ್ ಕೈಕಂಬ ಮತ್ತು ಇತರ ಮೂವರ ಜೊತೆಗೆ ಸೇರಿ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ ಕುಳಾಯಿ ಆರೋನ್ ವೈನ್ಸ್ ಬಳಿ ಸುಮಾರು 8.30ರ ಸುಮಾರಿಗೆ ಭರತ್ ಶೆಟ್ಟಿ ಮತ್ತು ಆತನ ಸಹಚರ ಮದ್ಯ ಖರೀದಿಸಲು ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಈ ಸಂದರ್ಭ ದ್ವಿಚಕ್ರ ವಾಹನದಲ್ಲಿ ಕುಳಿತಿದ್ದ ಭರತ್ ಎಂಬಾತನಿಗೆ ಬಿಳಿ ಬಣ್ಣದ ಕಾರ್ ಒಂದು ಏಕಾಏಕಿ ಬಂದು ಡಿಕ್ಕಿ ಹೊಡೆದಿದೆ.
ಈ ವೇಳೆ ಕಾರಿನಲ್ಲಿ ಬಂದ ದೀಕ್ಷಿತ್ ಶೆಟ್ಟಿ ಮತ್ತು ತಂಡ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ಕೈ ಬೆರಳುಗಳು ತುಂಡಾಗಿ, ಹೊಟ್ಟೆಯ ಭಾಗಕ್ಕೆ ಗಾಯಗಳಾಗಿದ್ದು, ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರೌಡಿ ಶೀಟರ್ ಭರತ್ ಶೆಟ್ಟಿ ಈ ಹಿಂದೆ ಪಾಂಡೇಶ್ವರ ಮತ್ತು ಸುರತ್ಕಲ್ ಠಾಣೆಯಲ್ಲಿ ಕೊಲೆ ಆರೋಪಿಯಾಗಿದ್ದಾನೆ. ಕೆಲವು ಆಪ್ತ ಮೂಲಗಳ ಮಾಹಿತಿಯ ಪ್ರಕಾರ ಈ ಹಲ್ಲೆ ವೈಯಕ್ತಿಕ ಕಾರಣಕ್ಕೆ ನಡೆದಿದೆ ಎಂದು ತಿಳಿದು ಬಂದಿದೆ. ಏಕೆಂದರೆ ಈ ಹಿಂದೆ ಕಳೆದ ವರ್ಷ ಡಿಸೆಂಬರ್ ಸಂದರ್ಭ ಭರತ್ ಶೆಟ್ಟಿ ಮತ್ತು ಆತನ ಗ್ಯಾಂಗ್ ಮದ್ಯದ ನಶೆ ಯಲ್ಲಿ ದೀಕ್ಷಿತ್ ಶೆಟ್ಟಿ ಎಂಬಾತನ ಮೇಲೆ ಮಾರಕಾಸ್ತ್ರ ದಿಂದ ಹಲ್ಲೆಗೆ ಯತ್ನಿಸಿದ್ದರು.
ಅಷ್ಟೇ ಅಲ್ಲದೆ ಶೈಲೇಶ್ ಕೈಕಂಬ ಎಂಬಾತನ ಮೇಲೆ ಕಳೆದ ಒಂದು ವಾರಗಳ ಹಿಂದೆ ಮತ್ತೆ ಇದೇ ಭರತ್ ಶೆಟ್ಟಿ ಮತ್ತು ಗ್ಯಾಂಗ್ ಹಲ್ಲೆ ನಡೆಸಿತ್ತು ಎನ್ನಲಾಗಿದೆ. ಅದೇ ವೈಯಕ್ತಿಕ ದ್ವೇಷದಿಂದ ದೀಕ್ಷಿತ್ ಮತ್ತು ಶೈಲೇಶ್ ಹಾಗೂ ಇತರರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿ ಲಭಿಸಿದೆ. ಇನ್ನು ಸ್ಪಷ್ಟವಾದ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆ ಮೂಲಕ ಹೊರಬೀಳಲಿದೆ.