ಬೆಂಗಳೂರು: ಸರ್ಕಾರಿ ಕೋಟಾದಡಿ ಖಾಸಗಿ ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ನಿಯಮಾವಳಿಗಳಂತೆ ಕೋರ್ಸ್ ಮುಗಿದ ಬಳಿಕ ಕನಿಷ್ಠ ಒಂದು ವರ್ಷದವರೆಗೆ ಗ್ರಾಮೀಣ ಪ್ರದೇಶದ ಯಾವುದೇ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಸೇವೆ ಸಲ್ಲಿಸಬೇಕು.
ಇದನ್ನು ಉಲ್ಲಂಘಿಸಿದರೆ ಬಾಂಡ್ ಅನ್ವಯ ದಂಡ ಪಾವತಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಆದರೆ ತಿದ್ದುಪಡಿ ಮಾಡಲಾದ ನಿಯಮವನ್ನು 10 ವರ್ಷಗಳ ಬಳಿಕ ಅಂದರೆ ಜುಲೈ 27, 2022ರಂದು ಗೆಜೆಟ್ ನೋಟಿಫಿಕೇಶನ್ ಮಾಡಿರುವ ಕಾರಣ 2019-20 ರಲ್ಲಿ ತಮ್ಮ ಎಂಬಿಬಿಎಸ್ ಶಿಕ್ಷಣ ಪೂರ್ಣಗೊಳಿಸಿದ 447 ವಿದ್ಯಾರ್ಥಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.
ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕ್ಯಾಪಿಟೇಶನ್ ಶುಲ್ಕದ ನಿಷೇಧ) ಕಾಯ್ದೆ 1984ರ ಸೆಕ್ಷನ್ 14 ರಂತೆ ನಿಯಮಗಳನ್ನು ರಚಿಸಲು ರಾಜ್ಯಕ್ಕೆ ಅಧಿಕಾರವಿದ್ದು, ಹೀಗಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಶಿಕ್ಷಣ ಪಡೆದವರು ನಿಯಮಾವಳಿಗಳಂತೆ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ತೀರ್ಪು ನೀಡುವ ಸಂದರ್ಭದಲ್ಲಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು 10 ವರ್ಷ ಅವಧಿ ತೆಗೆದುಕೊಂಡಿರುವುದಕ್ಕೆ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ಸರ್ಕಾರ ನಿದ್ರಾವಸ್ಥೆಯಲ್ಲಿತ್ತಾ ಎಂದು ಪ್ರಶ್ನಿಸಿದರು.