ಹುಬ್ಬಳ್ಳಿ: ಇಲ್ಲಿನ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ಇಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿರುವ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಇಂದು ಸಂಜೆ ಅಥವಾ ನಾಳೆ ಸಿಐಡಿಗೆ ಹಸ್ತಾಂತರ ಮಾಡುತ್ತೇವೆ ಎಂದರು.
ಅಂಜಲಿ ಕೊಲೆ ಆರೋಪಿ ಗಿರೀಶ್ ಪೊಲೀಸರ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗೆ ಶಿಕ್ಷೆ ಆಗಬೇಕು. ಹೀಗಾಗಿ ಪೊಲೀಸ್ ಇಲಾಖೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಇನ್ನು ಈ ಪ್ರಕರಣವನ್ನು ಇಂದು ಸಂಜೆ ಅಥವಾ ನಾಳೆ ಸಿಐಡಿಗೆ ಹಸ್ತಾಂತರ ಮಾಡುತ್ತೇವೆ.
ಮಾನವೀಯತೆ ದೃಷ್ಟಿಯಿಂದ 2 ಕುಟುಂಬಗಳನ್ನು ಭೇಟಿ ಮಾಡಿದ್ದೇನೆ. ಪೊಲೀಸರಿಗೆ ಕೆಲ ಸೂಚನೆ ಕೊಡಬೇಕು, ಹೀಗಾಗಿ ಹುಬ್ಬಳ್ಳಿಗೆ ಬಂದಿದ್ದೇನೆ.
ಇನ್ನು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಗಳು ಕೇಳಿಬಂದಿದ್ದು, ಇ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯಿಸಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಸಿಬಿಐಗೆ ಕೊಡಲ್ಲ. ರಾಜ್ಯದ ಪೊಲೀಸರು ಸಮರ್ಥರಿದ್ದಾರೆ, ಹೀಗಾಗಿ ಸಿಬಿಐಗೆ ಕೊಡಲ್ಲ. ಕೆಲವು ಬಾರಿ ಹೊರಗಿನವರಿಂದ ತನಿಖೆ ಆಗಬೇಕು. ಹೀಗಾಗಿ ನೇಹಾ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.