ಬೆಂಗಳೂರು: ಬಹುಭಾಷಾ ನಟ ಕಿಶೋರ್ ಬಿಜೆಪಿ ಪಕ್ಷವನ್ನು, ಪ್ರಧಾನಿ ಮೋದಿಯನ್ನು ಪದೇ ಪದೆ ಟೀಕಿಸುತ್ತಲೇ ಇರುತ್ತಾರೆ. ಸದ್ಯ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ವಿವಿಧ ಹಂತಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಆಗಿದೆ. ಇಂತಹ ಸಮಯದಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಆಕ್ರೋಶ ಹೊರ ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭಾಷಣದ ವೀಡಿಯೋ ತುಣುಕುಗಳನ್ನು ಹಂಚಿಕೊಂಡು “ನಿಜ ನೀವು ಸಾರ್ವಜನಿಕ ಜೀವನಕ್ಕೇ ಅಲ್ಲ , ಮನುಷ್ಯನಾಗಿರಲೇ ಅಯೋಗ್ಯ” ಎಂದು ಕಿಶೋರ್ ಬರೆದುಕೊಂಡಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಕಿಶೋರ್ ದ್ವೇಷ ಹೊರ ಹಾಕುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಸಾಕಷ್ಟು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಕೊಂಚ ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ.
“ನಿಜ ನೀವು ಸಾರ್ವಜನಿಕ ಜೀವನಕ್ಕೇ ಅಲ್ಲ , ಮನುಷ್ಯನಾಗಿರಲೇ ಅಯೋಗ್ಯ. ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಮಹಾಪಾಪ. ಚಿಲ್ಲರೆ ಕಳ್ಳನನ್ನೂ ನಾಚಿಸುವ, ಸತ್ಯ ಸಿದ್ಧಾಂತ ನೈತಿಕತೆ ವ್ಯಕ್ತಿತ್ವ ಅದಾವುದೂ ಇಲ್ಲದ ವಿಶ್ವಾಸ ಕಂಡ ಅತೀ ಸುಳ್ಳುಗಾರ, ಅತೀ ಪುಕ್ಕಲು, ಅತೀ ನಿಕೃಷ್ಠ. ಅತೀ ದುರಹಂಕಾರಿ, ಅತೀ ಕ್ರೂರ, ಅತೀ ಮೂರ್ಖ, ಅತೀ ಸಂವೇದನಾಹೀನ, ಅತೀ ಘನತೆಹೀನ, ಅತೀ ಆತ್ಮರತಿಲೋಲ, ಅತೀ ಜನವಿರೋಧಿ, ಅತೀ ಹೊಲಸು ನಾಲಿಗೆಯ, ಅತೀ ಸಂಕುಚಿತ ದೃಷ್ಟಿಯ ಅತೀ ಅಪಾಯಕಾರಿ, ಅತೀ ಭ್ರಷ್ಟ ನಿರಂಕುಶ ಪ್ರಭುತ್ವವಾದಿ ಎಂದು ಆಧಾರಸಹಿತ ಆ ಮನುಷ್ಯನೇ (?) ಹೇಳಿಬಿಡುತ್ತಾನೆ ಬೇಕಿದ್ದರೆ ಅವನ ನಡೆ ನುಡಿಯನ್ನು ನೋಡಿ” ಎಂದು ಕಿಶೋರ್ ಕೆಂಡಾಮಂಡಲವಾಗಿದ್ದಾರೆ.
“10 ವರ್ಷ ಅಧಿಕಾರವಿದ್ದೂ ಮಾಡಿದ ಕೆಲಸದ ಬಗ್ಗೆ, ರೈತರ, ಸೈನಿಕರ, ಮಹಿಳೆಯರ, ಮಕ್ಕಳ, ಆಸ್ಪತ್ರೆ ಕಾಲೇಜುಗಳ ಅಭಿವೃದ್ಧಿಯ ಬಗ್ಗೆ ಮಾತಾಡಲು ಯೋಗ್ಯತೆಯಿಲ್ಲದೇ.. ಬರೀ ಸುಳ್ಳು, ದ್ವೇಷ ಕಾರುವುದು. ಮುಸ್ಲಿಂ ತೆರಿಗೆಯಂತೆ , ನುಸುಳುಕೋರರಂತೆ, ಪಾಕೀಸ್ಥಾನವಂತೆ, ರೂಮು ಕಿತ್ಕೊತಾರಂತೆ.. ಎಮ್ಮೆ ಕಿತ್ಕೊತಾರಂತೆ, ಸೈಕಲ್ ಕಿತ್ಕೊತಾರಂತೆ, ವೋಟು ಜಿಹಾದ್ ಅಂತೆ.. ಮಂದಿರಕ್ಕೆ ಬೀಗವಂತೆ.. ಬರೀ ತಲೆಬುಡವಿಲ್ಲದ ಮಾತುಗಳು” ಎಂದು ಕಿಶೋರ್ ಟೀಕಿಸಿದ್ದಾರೆ.
ಮುಸ್ಲಿಂ ಭಯೋತ್ಪಾದಕರು ಇಸ್ಲಾಂನ ಮಾನ ಕಳೆದಂತೆ ಅಧಿಕಾರಕ್ಕಾಗಿ ಹಿಂದೂ ಬಣ್ಣ ಬಳಿದುಕೊಂಡ ಈ ಢೋಂಗಿ ಮನುಷ್ಯ ಹಿಂದೂ ಧರ್ಮದ ಮಾನ ವಿಶ್ವದಾದ್ಯಂತ ಮೂರು ಕಾಸಿಗೆ ಹರಾಜು ಹಾಕಿಬಿಟ್ಟ..’ ಎಂದು ಕಿಶೋರ್ ಜರಿದಿದ್ದಾರೆ. ಆಕ್ರೋಶ ಹೊರ ಹಾಕಿದ್ದಾರೆ.