August 18, 2025
n6098356561716094862670af5d82eff5afcfc9816824585c69a97c2b7680348799a259068aa78ef7764750

ಹುಬ್ಬಳ್ಳಿ : ನಗರದ ವಿದ್ಯಾರ್ಥಿನಿ ಅಂಜಲಿ ಅಂಬಿಗೇರ್‌ ಹತ್ಯೆ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿಯ ತಲೆದಂಡವಾಗಿದೆ. ಹುಬ್ಬಳ್ಳಿ ಧಾರವಾಡ ನಗರದ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್‌ ಆಯುಕ್ತರಾಗಿರುವ ಐಪಿಎಸ್‌ ಅಧಿಕಾರಿ ಎಂ.ರಾಜೀವ್‌ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ.
ಇದೇ ಪ್ರಕರಣದಲ್ಲಿ ಇಬ್ಬರನ್ನು ಅಮಾನತುಪಡಿಸಲಾಗಿದೆ. ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್‌ ಆಯುಕ್ತಾಲಯ ವ್ಯಾಪ್ತಿಯಲ್ಲಿ ಒಂದೇ ತಿಂಗಳ ಅವಧಿಯೊಳಗೆ ಇಬ್ಬರು ಯುವತಿಯರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಇದೇ ಪ್ರಕರಣದಲ್ಲಿ ಹಾಲಿ ಪೊಲೀಸ್‌ ಆಯುಕ್ತರಾಗಿರುವ ರೇಣುಕಾ ಸುಕುಮಾರ್‌ ಅವರನ್ನು ಎತ್ತಂಗಡಿ ಮಾಡಿ ಹೊಸ ಆಯುಕ್ತರನ್ನು ನೇಮಿಸುವ ಸಾಧ್ಯತೆಯಿದೆ.
ನಾಲ್ಕು ದಿನದ ಹಿಂದೆ ಹುಬ್ಬಳ್ಳಿ ಯುವತಿ ಅಂಜಲಿ ಅಂಬಿಗೇರ್‌ ಳನ್ನು ಮನೆಯಲ್ಲಿ ಭೀಕರವಾಗಿ ಗಿರೀಶ್‌ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದ. ಈ ಘಟನೆ ಹಿನ್ನೆಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ನಂತರ ಮತ್ತೊಂದು ಘಟನೆ ತಲ್ಲಣ ಸೃಷ್ಟಿಸಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಫಲವಾಗಿರುವ ಆರೋಪದ ಮೇಲೆ ಡಿಸಿಪಿ ರಾಜೀವ್‌ ಅವರನ್ನು ಅಮಾನತು ಮಾಡಲಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಭಾನುವಾರ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದು ಇದರ ಮೊದಲೇ ಈ ಆದೇಶ ಜಾರಿಯಾಗಿದೆ.
ಗಿರೀಶ್‌ ಜೀವ ಬೆದರಿಕೆ ಹಾಕಿದ ಕುರಿತಾಗಿ ಪೊಲೀಸರಿಗೆ ದೂರು ನೀಡಿದ್ದರೂ ಅದನ್ನು ನಿರ್ಲಕ್ಷಿಸಿದ ಗಂಭೀರ ಆರೋಪ ಪೊಲೀಸರ ವಿರುದ್ದ ಕೇಳಿ ಬಂದಿತ್ತು. ಆಗಲೇ ಗಿರೀಶನ ವಿರುದ್ದ ಕ್ರಮ ಆಗಿದ್ದರೆ ಯುವತಿ ಬದುಕುಳಿಯುತ್ತಿದ್ದಳು ಎನ್ನುವುದು ಕುಟುಂಬದವರ ಹೇಳಿಕೆಯಾಗಿತ್ತು.
ಇದೇ ಪ್ರಕರಣದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಚಂದ್ರಶೇಖರಚಿಕ್ಕೋಡಿ ಹಾಗೂ ಸಿಬ್ಬಂದಿಯೊಬ್ಬರ ಅಮಾನತು ಕೂಡ ಮಾಡಲಾಗಿದೆ. ಈಗ ಐಪಿಎಸ್‌ ಅಧಿಕಾರಿಯ ತಲೆದಂಡವೂ ಆಗಿದೆ.
ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾಗಿರುವ ಪೊಲೀಸ್‌ ಆಯುಕ್ತರ ವಿರುದ್ದವೂ ಅಸಮಾಧಾನ ಕೇಳಿ ಬಂದಿದ್ದು, ಅವರನ್ನು ಬದಲಿಸಿ ಡಿಐಜಿಯಾಗಿರುವ ಸುಧೀರ್‌ ರೆಡ್ಡಿ ಅವರನ್ನು ಹುಬ್ಬಳ್ಳಿ ಧಾರವಾರ ಪೊಲೀಸ್‌ ಆಯುಕ್ತರಾಗಿ ನೇಮಿಸುವ ಸಾಧ್ಯತೆಯಿದೆ. ಒಂದೆರಡು ದಿನದಲ್ಲಿ ಆದೇಶ ಆಗಬಹುದು ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *