August 18, 2025
CM_Siddaramaiah

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಗಣನೀಯ ಕುಸಿತವಾಗಿರುವುದಕ್ಕೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಪಾಂಕ ನೀಡಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿರುವ ಕ್ರಮವನ್ನು ಕಟು ಮಾತುಗಳಲ್ಲಿ ಪ್ರಶ್ನಿಸಿದ್ದಾರೆ.
ವಿವಿಧ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳ ಜತೆ ವಿಧಾನಸೌಧದಲ್ಲಿ ಶುಕ್ರವಾರ ಅನೌಪಚಾರಿಕ ಸಭೆ ನಡೆಸಿದ ಅವರು, ಪ್ರಗತಿ ಪರಿಶೀಲನೆ ನಡೆಸಿದರು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತ ಮತ್ತು ಕೃಪಾಂಕ ನೀಡಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿರುವ ಕ್ರಮದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೂಡ ಈ ಆಕ್ಷೇಪಕ್ಕೆ ಏರಿದ ಧ್ವನಿ
ಯಲ್ಲಿಯೇ ದನಿಗೂಡಿಸಿದರು ಎಂದು ಮೂಲಗಳು ತಿಳಿಸಿವೆ.

‘ಕೃಪಾಂಕ ನೀಡಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ನಿರ್ಧಾರ ಕೈಗೊಂಡವರು ಯಾರು’ ಎಂದು ಮುಖ್ಯಮಂತ್ರಿಯವರು ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್ ಸಿಂಗ್ ಅವರನ್ನು ಪ್ರಶ್ನಿಸಿದರು. ಕೋವಿಡ್‌-19 ಸಂಕಷ್ಟದ ಅವಧಿಯಲ್ಲೂ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿದ್ದನ್ನು ಪ್ರಸ್ತಾಪಿಸಿ, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಅಧಿಕಾರಿಗಳು ಯತ್ನಿಸಿದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಅಧಿಕಾರಿಗಳನ್ನು ಗದರಿದರು ಎಂದು ಮೂಲಗಳು ಹೇಳಿವೆ.

‘ಕೋವಿಡ್‌-19 ಅವಧಿಯಲ್ಲಿ ಕೃಪಾಂಕ ನೀಡಿರುವುದನ್ನು ಒಪ್ಪಿಕೊಳ್ಳಬಹುದು. ಆದರೆ, ಈಗ 20 ಅಂಕಗಳನ್ನು ಕೃಪಾಂಕ ರೂಪದಲ್ಲಿ ನೀಡುವ ಅಗತ್ಯ ಏನಿತ್ತು’ ಎಂದು ಮುಖ್ಯಮಂತ್ರಿಯವರು ಸಭೆಯಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.

ಮೂಲಗಳ ಪ್ರಕಾರ, ‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ, ವೆಬ್‌ಕಾಸ್ಟಿಂಗ್‌ನಂತಹ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅವೆಲ್ಲವನ್ನೂ ಮಾಡಿದ ಬಳಿಕ ಕೃಪಾಂಕ ನೀಡಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿರುವುದು ಒಂದು ರೀತಿಯಲ್ಲಿ ಸಾಮೂಹಿಕ ನಕಲಿನಂತೆಯೇ ಅಲ್ಲವೆ? ಈ ರೀತಿಯ ಧೋರಣೆಯನ್ನು ಒಪ್ಪಿಕೊಳ್ಳಲಾಗದು’ ಎಂಬುದಾಗಿ ಕಟುವಾಗಿ ಹೇಳಿದ್ದಾರೆ.

’10, 15 ಅಂಕ ಗಳಿಸಲಾಗದ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿ ತೇರ್ಗಡೆ ಮಾಡುವುದಾದರೆ ಮಂಡಳಿ ಪರೀಕ್ಷೆ ನಡೆಸುವ ಅಗತ್ಯವಾದರೂ ಏನಿದೆ? ಇಲಾಖೆಯ ಇಂತಹ ನಿರ್ಧಾರದಿಂದ ವರ್ಷವಿಡೀ ಶ್ರಮಪಟ್ಟು ಓದಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *