August 18, 2025
vijaykarnataka

ನವದೆಹಲಿ: ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ ಹೀರೊಗಳು, ಕ್ರಿಕೆಟಿಗರು, ಸೆಲೆಬ್ರಿಟಿಗಳು ನೂರಾರು ಉತ್ಪನ್ನಗಳ ಜಾಹೀರಾತುಗಳಲ್ಲಿ ಅಭಿನಯಿಸುವ ಮೂಲಕ, ಆ ಉತ್ಪನ್ನಗಳನ್ನೂ ತಾವೇ ಬಳಸಿದ್ದೇವೆ ಎಂದು ಹೇಳುವ ಮೂಲಕ ಅಥವಾ ನಟಿಸುವ ಮೂಲಕ ಕೋಟ್ಯಂತರ ಜನರನ್ನು ಸೆಳೆಯುತ್ತಾರೆ.

ಇನ್ನು, ಅಭಿಮಾನಿಗಳು, ಅನುಯಾಯಿಗಳು ಕೂಡ ನೆಚ್ಚಿನ ನಟ, ಕ್ರಿಕೆಟಿಗನ ಜಾಹೀರಾತು ನೋಡಿ, ಆ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಹೀಗೆ ನಟರು ಸೇರಿ ಸೆಲೆಬ್ರಿಟಿಗಳ ಜಾಹೀರಾತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೌದು, ಶಾರುಖ್‌ ಖಾನ್‌ ಅವರ ಪಾನ್‌ ಮಸಾಲ ಜಾಹೀರಾತಿನಿಂದ ಪ್ರಚೋದನೆಗೊಂಡು ಗುಟ್ಕಾ ಸೇವಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.
ಮಕ್ಕಳು ಗುಟ್ಕಾ ತಿಂದು, ಅದರ ಪರಿಣಾಮ ಗೊತ್ತಿರದೆ ಮಾತನಾಡಿದ ವಿಡಿಯೊವನ್ನು ಸತ್ಯ, ನ್ಯಾಯ, ಪ್ರೀತಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ನೀವು ಗುಟ್ಕಾ ತಿಂತಿದ್ದೀರಲ್ಲ, ಸತ್ತು ಹೋದ್ರೆ ಏನ್‌ ಗತಿ” ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಕೇಳುತ್ತಾರೆ. ಆಗ ಮಕ್ಕಳು, “ಶಾರುಖ್‌ ಖಾನ್‌ ಸತ್ತಿಲ್ಲ, ನಾವು ಸಾಯ್ತೀವಾ” ಎಂದಿದ್ದಾರೆ. “ಶಾರುಖ್‌ ಖಾನ್‌ ಏಕೆ ಸಾಯುತ್ತಾರೆ” ಎಂಬ ಪ್ರಶ್ನೆಗೆ, “ಶಾರುಖ್‌ ಖಾನ್‌ ಗುಟ್ಕಾ ತಿಂತಾರಲ್ಲ, ಅವ್ರೇ ಸಾಯಲ್ಲ, ನಾವ್‌ ಹೇಗೆ ಸಾಯ್ತೀವಿ” ಎಂದಿದ್ದಾರೆ. ಅಷ್ಟೇ ಅಲ್ಲ, “ಶಾರುಖ್ ಖಾನ್‌ ಗುಟ್ಕಾ ತಿನ್ನೋದು ನಿಮಗೆ ಹೇಗೆ ಗೊತ್ತು” ಎಂದು ಕೇಳಿದ್ದಕ್ಕೆ, “ಜಾಹೀರಾತಿನಲ್ಲಿ ನೋಡಿದ್ದೀವಲ್ಲ” ಎಂದಿದ್ದಾರೆ.
ಶಾರುಖ್‌ ಖಾನ್‌ ಪಾನ್‌ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದನ್ನೇ ಈ ಮಕ್ಕಳು ನಿಜ ಎಂದು ಭಾವಿಸಿದ್ದಾರೆ. ಶಾರುಖ್‌ ಖಾನ್‌ ಗುಟ್ಕಾ ತಿಂತಾರೆ, ಅವರಿಗೇ ಏನೂ ಆಗಲ್ಲ. ಇನ್ನು ನಮಗೆ ಏನಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂದು, ಚಿಕ್ಕ ವಯಸ್ಸಿನಲ್ಲೇ ಗುಟ್ಕಾ ತಿನ್ನೋದನ್ನು ಕಲಿತಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳ ಜಾಹೀರಾತುಗಳಲ್ಲಿ ನಟಿಸುವಾಗ, ಆ ಉತ್ಪನ್ನದಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮ ಏನು ಎಂಬುದನ್ನು ಈ ವಿಡಿಯೊ ನೋಡಿ ಕಲಿಯಬೇಕಿದೆ ಎಂದು ಆಗ್ರಹಿಸಿದ್ದಾರೆ.
“ಸೆಲೆಬ್ರಿಟಿಗಳು ನಮ್ಮ ಕನ್ನಡದ ಕಣ್ಮಣಿ ಡಾಕ್ಟರ್ ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರಂತಹವರನ್ನು ನೋಡಿ ಕಲಿಯಬೇಕು. ಥೂ ನಿಮ್ಮ, ನಿಮಗೆಲ್ಲ ಇದನ್ನು ನೋಡಿ ನಾಚಿಕೆ ಆಗಬೇಕು. ಇಂತಹ ಜಾಹೀರಾತು ಕೊಟ್ಟು ಯುವ ಜನತೆಯ ದಾರಿ ತಪ್ಪಿಸುತಿರುವ ನಿಮಗೆ ಧಿಕ್ಕಾರವಿರಲಿ” ಎಂಬುದಾಗಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಕಮೆಂಟ್‌ ಮಾಡಿದ್ದು, “ಈ ಗುಟ್ಕಾ ತಿಂದು ಮಕ್ಕಳು ಏನಾದರೂ ಮೃತಪಟ್ಟರೆ ಆಯಾ ಜಾಹೀರಾತು ಕಂಪನಿ ಹಾಗೂ ಜಾಹೀರಾತಿನಲ್ಲಿ ನಟಿಸುವ ಸೆಲೆಬ್ರಿಟಿಗಳು ಪರಿಹಾರ ನೀಡಬೇಕು ಎಂಬ ಕಾನೂನು ಬಂದರೆ ಮಾತ್ರ ಇದೆಲ್ಲ ಸರಿಯಾಗುತ್ತದೆ” ಎಂದಿದ್ದಾರೆ.

Leave a Reply

Your email address will not be published. Required fields are marked *