ತಿರುವನಂತಪುರಂ: ಕೇರಳದ ವೈದ್ಯಕೀಯ ವಲಯದಲ್ಲಿ ಮಹಾ ಎಡವಟ್ಟುಗಳು ಇತ್ತೀಚೆಗೆ ಒಂದಾದ ಮೇಲೊಂದು ನಡೆಯುತ್ತಲೇ ಇದೆ. ಇತ್ತೀಚೆಗಷ್ಟೇ ಹೆರಿಗೆ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಬಿಟ್ಟು ಶಸ್ತ್ರಚಿಕಿತ್ಸೆ ಮಾಡಿದ್ದ ಪ್ರಮಾದ ಮಾಸುವ ಮುನ್ನವೇ ಕೋಝಿಕ್ಕೋಡ್ (Kozhikode) ವೈದ್ಯಕೀಯ ಕಾಲೇಜಿನಲ್ಲಿ ಮತ್ತೊಂದು ಮಹಾ ಪ್ರಮಾದ ನಡೆದಿದೆ.
4 ವರ್ಷದ ಬಾಲಕಿಗೆ ಕೈ ಬೆರಳಿನ ಬದಲು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ತಂಡ ನಿರ್ಲಕ್ಷ್ಯ ತೋರಿರುವುದು ಬೆಳಕಿಗೆ ಬಂದಿದೆ.
6 ಬೆರಳಿದ್ದ ಬಾಲಕಿಗೆ ಆಪರೇಷನ್
4 ವರ್ಷದ ಬಾಲಕಿ ಸಂಬಂಧಿಕರು ಹೇಳುವ ಪ್ರಕಾರ, “ಬಾಲಕಿ ಕೈಯಲ್ಲಿ ಆರು ಬೆರಳುಗಳು ಇದ್ದ ಕಾರಣ ಆಕೆಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು 6ನೇ ಬೆರಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬಹುದು ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪಿಕೊಂಡ ಬಾಲಕಿ ಪೋಷಕರು, ಶಸ್ತ್ರಚಿಕಿತ್ಸೆಗೆ ಕಳುಹಿಸಿದ್ದಾರೆ.
ಕೈ ಬದಲು ನಾಲಿಗೆಗೆ ಆಪರೇಷನ್
ಸ್ವಲ್ಪ ಸಮಯದ ನಂತರ ವಾಪಸ್ಸಾದ ಬಾಲಕಿಯನ್ನು ಕಂಡು ಪೋಷಕರು ಕಂಗಾಲಾಗಿದ್ದಾರೆ. ಬಾಯಿಗೆ ಪ್ಲಾಸ್ಟರ್ ಹಾಕಿದ್ದ ಕಾರಣ ಏನಾಯಿತು ಎಂಬ ಗೊಂದಲದಲ್ಲಿ ಪೋಷಕರು ಮಗುವಿನ ಕೈಯನ್ನು ಗಮನಿಸಿದ್ದಾರೆ. ಆಗ ಬಾಲಕಿ ಕೈಯಲ್ಲಿದ್ದ 6ನೇ ಬೆರಳು ಹಾಗೇ ಇತ್ತು” ಎಂದು ಸಂಬಂಧಿಕರು ಹೇಳಿದ್ದಾರೆ.
ಘಟನೆ ಬಳಿಕ ಕ್ಷಮೆ ಕೇಳಿದ ವೈದ್ಯರು
ಪೋಷಕರು ಕೂಡಲೇ ಅಲ್ಲಿದ್ದ ನರ್ಸ್ ಅನ್ನು ಕೇಳಿದ್ದಾರೆ. ಆದರೆ ನರ್ಸ್ ನಗುತ್ತಾ, ನಾಲಿಗೆಯ ಸಮಸ್ಯೆ ಇದೆ ಎಂದು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಆಕೆ ಹೇಳಿದ ಕೆಲವೇ ಕ್ಷಣಗಳಲ್ಲಿ ವೈದ್ಯರು ಪೋಷಕರ ಬಳಿ ಬಂದು ಕ್ಷಮೆಯಾಚಿಸಿದ್ದಾರೆ. ಹಾಗೇ ಬಾಲಕಿಯ 6ನೇ ಬೆರಳನ್ನು ತೆಗೆಯುವುದಾಗಿ ತಿಳಿಸಿ ಮತ್ತೆ ಕರೆದುಕೊಂಡು ಹೋಗಿದ್ದಾರೆ ಎಂದು ಆಸ್ಪತ್ರೆಯಲ್ಲಿ ನಡೆದ ವಿಷಯವನ್ನು ಸಂಬಂಧಿಕರು ವಿವರಿಸಿದ್ದಾರೆ.
ಸೂಕ್ತ ತನಿಖೆಗೆ ಆದೇಶ
ತಕ್ಷಣವೇ ವೈದ್ಯರು ಬಾಲಕಿ ಪೋಷಕರ ಬಳಿ ಬಂದು ತಪ್ಪೊಪ್ಪಿಕೊಂಡು ಕ್ಷಮೆ ಕೋರಿದ್ದಾರೆ. ವಿಷಯ ತಿಳಿದ ಕೂಡಲೇ ಕೆಂಡಾಮಂಡಲರಾಗಿರುವ ವೈದ್ಯಕೀಯ ಕಾಲೇಜಿನ ಅಧೀಕ್ಷಕರು ಆಪರೇಷನ್ ಥಿಯೇಟರ್ ನಲ್ಲಿ ಭಾಗಿಯಾಗಿದ್ದ ವೈದ್ಯರ ತಂಡದ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದಾರೆ.