December 7, 2024

ಬೆಳಗಾವಿ: ಮುಂಬೈ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳ ಮೇಲೆ ಲೋಂಡಾ ಬಳಿ ಚಾಕುವಿನಿಂದ ಹಲ್ಲೆ ನಡೆಸಿದ ಅಹಿತಕರ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಒಬ್ಬ ಸಿಬ್ಬಂದಿ ಸಾವನ್ನಪ್ಪಿ, ಟಿಟಿಇ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಇವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಬೋಗಿ ಅಟೆಂಡರ್ ದೇವ‌ಋಷಿ ವರ್ಮಾ (23) ಮೃತಪಟ್ಟವರು. ಹೃದಯಕ್ಕೇ ಚಾಕು ಇರಿದಿದ್ದರಿಂದ ವರ್ಮಾ ತೀವ್ರ ನಿತ್ರಾಣಗೊಂಡರು. ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ನಡೆದಿದ್ದೇನು?

ಪುದುಚೆರಿ- ಮುಂಬೈ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನ ಎಸ್‌-8 ಬೋಗಿಯಲ್ಲಿ ಘಟನೆ ನಡೆದಿದೆ. ರೈಲು ಧಾರವಾಡ ದಾಟಿ ಬೆಳಗಾವಿಯತ್ತ ಚಲಿಸುತ್ತಿತ್ತು. ಗುಂಜಿ-ಖಾನಾಪುರ ಮಧ್ಯದಲ್ಲಿ ಟಿಕೆಟ್‌ ಪರಿವೀಕ್ಷಕ (ಟಿಟಿಇ) ಅಶ್ರಫ್‌ ಕಿತ್ತೂರ ಅವರು ಟಿಕೆಟ್‌ ಚೆಕ್‌ ಮಾಡುತ್ತಿದ್ದರು. ಬೋಗಿಯಲ್ಲಿ ಮುಸುಕು ಧರಿಸಿ ಕುಳಿತಿದ್ದ ವ್ಯಕ್ತಿಯಿಂದ ಟಿಕೆಟ್‌ ಕೇಳಿದರು. ಅವರಿಗೆ ಟಿಕೆಟ್‌ ತೋರಿಸಲು ನಿರಾಕರಿಸಿದಾಗ ಮಾತಿಗೆ ಮಾತು ಬೆಳೆಯಿತು. ತನ್ನ ಬಳಿ ಇದ್ದ ಚಾಕು ತೆಗೆದ ಮುಸುಕುಧಾರಿ ಟಿಟಿಇ ಅವರ ಮೇಲೆ ಹಲ್ಲೆ ನಡೆಸಿದ. ಗಾಯಗೊಂಡ ಟಿಟಿಇ ಅವರನ್ನು ರಕ್ಷಿಸಲು ಅಟೆಂಡರ್‌ ದೇವಋಷಿ ಧಾವಿಸಿದರು. ಆರೋಪಿ ಅವರ ಎದೆಗೂ ಚಾಕು ಇರಿದ. ಜಗಳ ಬಿಡಿಸಲು ಬಂದ ಇನ್ನಿಬ್ಬರು ಸಿಬ್ಬಂದಿ ಮೇಲೂ ಚಾಕುವಿನಿಂದ ದಾಳಿ ನಡೆಸಿದ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ರೈಲು ಸಂಜೆ 5ರ ಸುಮಾರಿಗೆ ಬೆಳಗಾವಿ ನಿಲ್ದಾಣ ತಲುಪಿತು. ಗಾಯಗೊಂಡ ನಾಲ್ವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ರಕ್ತಸ್ರಾವವಾಗಿದ್ದರಿಂದ ದೇವಋಷಿ ಅಸುನೀಗಿದರು. ಟಿಟಿಇ ಸೇರಿ ಮೂವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಆರೋಪಿ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್ ಜಿಲ್ಲಾಸ್ಪತ್ರೆಗೆ ಹಾಗೂ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದೇವಋಷಿ ಅವರ ಮರಣೋತ್ತರ ಪರೀಕ್ಷೆ ಮಾಡಿ, ಶವವನ್ನು ಇಲಾಖೆಯ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ದೇವಋಷಿ ಹೊರಗುತ್ತಿಗೆ ಆಧಾರದ ಮೇಲೆ ಬೋಗಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದರು. ಅವರ ಮೂಲದ ಬಗ್ಗೆ ಪರಿಶೀಲನೆ ನಡೆದಿದೆ.

Leave a Reply

Your email address will not be published. Required fields are marked *