ಪುಣೆ: ವೈಚಾರಿಕ ಭಿನ್ನಾಭಿಪ್ರಾಯಗಳ ಕಾರಣಕ್ಕೆ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಿರುವ ನ್ಯಾಯಾಲಯ ಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಜೀವಾವಧಿ ಶಿಕ್ಷೆ ಹಾಗೂ ಐದು ಲಕ್ಷ ರು. ದಂಡ ವಿಧಿಸಿ ಆದೇಶಿಸಿದೆ. ಇದೇ ವೇಳೆ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಸಂಸ್ಥಾಪಕರಾದ ನರೇಂದ್ರ ದಾಭೋಲ್ಕರ್ ಅವರನ್ನು ಇಬ್ಬರು ದುಷ್ಕರ್ಮಿಗಳು 2013ರಲ್ಲಿ ಪುಣೆಯಲ್ಲಿ ಗುಂಡಿಕ್ಕಿ ಕೊಂದಿದ್ದರು. ಸನಾತನ ಸಂಸ್ಥಾ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪಿಗಳನ್ನು ಕೇಂದ್ರೀಯ ತನಿಖಾ ತಂಡವು 2016 ರಿಂದ 2019ರ ಅವಧಿಯಲ್ಲಿ ಬಂಧಿಸಿತ್ತು.
ಪ್ರಕರಣದಲ್ಲಿ ವೀರೇಂದ್ರ ತಾವೆ, ಸಂಜೀವ್ ಪುನೋಲ್ಕರ್, ವಿಕ್ರಮ್ ಭಾವೆ, ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರನ್ನು ಬಂಧಿಸಿದ್ದ ಮಹಾರಾಷ್ಟ್ರ ಪೊಲೀಸರು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಗೆ ಜೀವಾವಧಿ ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಆರೋಪಿಗಳಾದ ಡಾ. ವೀರೇಂದ್ರ ಸಿಂಗ್ ತಾವಡೆ, ಸಚಿನ್ ಅಂದೂರೆ, ಶರದ್ ಶರದ್ ಕಲಾಸ್ಕರ್ ಮತ್ತು ವಿಕ್ರಮ್ ಭಾವೆ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 120ಬಿ (ಕ್ರಿಮಿನಲ್ ಪಿತೂರಿ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಆನಂತರ, ಹೆಚ್ಚುವರಿಯಾಗಿ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ (ಯುಎಪಿಎ) ಮತ್ತು ಶಸ್ತ್ರಾಸ್ತ್ರ ಕಾಯಿದೆಯ ವಿವಿಧ ಸೆಕ್ಷನ್‌ಗಳನ್ನು ಅನ್ವಯಿಸಲಾಗಿತ್ತು.