ಬೆಂಗಳೂರು: ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ 2023-24ನೇ ಸಾಲಿನ ಎಸ್‌ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವು ಮೇ 9ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆಗಳು ಹಾಗೂ ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್.ಮಂಜುಶ್ರೀ ತಿಳಿಸಿದ್ದಾರೆ. ಗುರುವಾರ ಬೆಳಿಗ್ಗೆ 10.30 ಮಂಡಳಿ ಆವರಣದಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿದ್ದು ಅಲ್ಲಿ ವಿವರವನ್ನು ಪ್ರಕಟಿಸಲಾಗುತ್ತದೆ. ಇದಾಗುತ್ತಲೇ 10.30 ಕ್ಕೆ ವೆಬ್‌ಸೈಟ್ ಮೂಲಕವು ಫಲಿತಾಂಶವನ್ನು ವೀಕ್ಷಿಸಬಹುದು.
ಮಾರ್ಚ್ ಏಪ್ರಿಲ್ 2024ರ ಎಸ್‌ಎಸ್‌ಎಲ್ ಸಿ ಪರೀಕ್ಷೆ-1 ಅನ್ನು ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ನಡೆಸಲಾಯಿತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಈಗಾಗಲೇ ಮುಕ್ತಾಯವಾಗಿದೆ. ಎಸ್‌ಎಸ್ ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ಮೇ 9ರ ಗುರುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿದೆ ಎಂದು ಮಂಡಳಿ ಅಧ್ಯಕ್ಷೆ ಎನ್.ಮಂಜಿಶ್ರೀ ತಿಳಿಸಿದ್ದಾರೆ
ಕರ್ನಾಟಕದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ನಡೆಸಲಾಗಿತ್ತು. ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಮತ್ತು ಸಂಸ್ಕೃತದೊಂದಿಗೆ ಪರೀಕ್ಷೆ ನಡೆಸಲಾಗಿತ್ತು.
ಈ ಬಾರಿಯ ಎಸ್ಎಸ್‌ಎಲ್‌ಸಿ ಪರೀಕ್ಷೆಗೆ 8.69 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು, 4.28 ಬಾಲಕಿಯರು ಸೇರಿದ್ದಾರೆ. 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 5,424 ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಇರಲಿ ಎಚ್ಚರ
ಫಲಿತಾಂಶ ಪರಿಶೀಲನೆ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳು ವಂಚಿಸುವ ಸಾಧ್ಯತೆ ಇರುತ್ತದೆ. ತಮ್ಮಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳನ್ನು ನೋಡಬಹುದು ಎಂದು ಹೇಳಿ ನಿಮ್ಮ ಮಾಹಿತಿ ಪಡೆದು ವಂಚಿಸುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೆಎಸ್‌ಇಎಬಿ ಅಧಿಕೃತ ವೆಬ್‌ಸೈಟ್‌ನಲ್ಲೇ ಫಲಿತಾಂಶಗಳನ್ನು ವೀಕ್ಷಿಸುವುದು ಉತ್ತಮ.