ಬೆಳಗಾವಿ : ಕಳೆದ ಹದಿನೈದು ದಿನದ ಹಿಂದೆ ನನ್ನ ಮಗಳ ಹತ್ಯೆಯಾದ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಚುನಾವಣಾ ಪ್ರಚಾರ ಮರೆತು ನಮ್ಮ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅಕ್ಕನ ಸ್ಥಾನದಲ್ಲಿ ನಿಂತು ನನಗೆ ಧೈರ್ಯ ಹೇಳಿರುವುದಕ್ಕೆ ಕೃತಜ್ಞತೆ ಸಲ್ಲಿಸಲು ಭೇಟಿ ನೀಡಿರುವೆ ಎಂದು ಹತ್ಯೆಯಾದ ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಹೇಳಿದರು.
ಗುರುವಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ನನ್ನ ಪುತ್ರಿಯನ್ನು ಹತ್ಯೆ ಮಾಡಿರುವ ಆರೋಪಿಗೆ ಶಿಕ್ಷೆ ನೀಡುವ ನನ್ನ ಮನವಿಯನ್ನು ಸಚಿವೆ ಹೆಬ್ಬಾಳ್ಕರ್ ಸಿಎಂ ಹಾಗೂ ಡಿಸಿಎಂ ಗಮನಕ್ಕೆ ತಂದಿದ್ದಾರೆ. ನಮ್ಮ ಎದುರಿಗೆ ಡಿಸಿಎಂ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದರು. ನೇಹಾ ಹತ್ಯೆಯಾದ ನಾಲ್ಕು ದಿನಗಳಲ್ಲಿ ಸಿಐಡಿ ತನಿಖೆಗೆ ಆದೇಶ ನೀಡಲಾಯಿತು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಡಿರುವ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಅವರ ಮನೆಗೆ ಭೇಟಿ ನೀಡಿರುವೆ ಎಂದರು.
ನಮ್ಮ ವೀರಶೈವ ಲಿಂಗಾಯತ ಸಮುದಾಯದ ಮೃಣಾಲ್ ಹೆಬ್ಬಾಳಕರ್ ಅಭ್ಯರ್ಥಿಯಾಗಿದ್ದಾರೆ. ಲೋಕಸಭೆಯಲ್ಲಿ ನಮ್ಮ ಪರವಾಗಿ ಧ್ವನಿ ಎತ್ತಲು ಮೃಣಾಲ್ ಅವರಿಗೆ ಜಿಲ್ಲೆಯ ಮತದಾರರು ಆಶಿರ್ವಾದ ಮಾಡಬೇಕು. ಈಗ ತಪ್ಪಿದರೆ ನಮ್ಮ ಪರವಾಗಿ ಧ್ವನಿ ಎತ್ತುವವರು ಯಾರೂ ಇಲ್ಲವಾಗುತ್ತಾರೆ.
ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸುವ ಭರವಸೆಯನ್ನು ರಾಜ್ಯದ ಸಚಿವರು ಮಾಡಿದ್ದಾರೆ ಎಂದು ನಿರಂಜನ ಹಿರೇಮಠ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.