ಚುನಾವಣೆ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಸಂಸದೆ ಮಂಗಳಾ ಅಂಗಡಿ ಹೇಳಿದರು.ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತವನ್ನು ಪಡೆದು ಆಯ್ಕೆಯಾದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಹೇಳಿದರು.
ನಗರದಲ್ಲಿಂದು ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಮಗೆ ಸೋಲಾಗಿರುವ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ. ಜನರು ಕೊಟ್ಟ ಸಂದೇಶಕ್ಕೆ ನಾವು ತಲೆ ಬಾಗಬೇಕಾಗುತ್ತದೆ ಎಂದರು. ನಮ್ಮ ಸರ್ಕಾರದ ಯೋಜನೆಗಳು ಮನೆ ಮನೆಗೆ ತಲುಪಿಸಲು ಸಾಧ್ಯ ಆಗಲಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮನ ಮುಟ್ಟುವಂತೆ ತಿಳಿಸುವ ಕೆಲಸ ಮಾಡುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಸಾಕಷ್ಟು ಶ್ರಮ ವಹಿಸಿದ್ದರು. ಮುಂದೆ ಇನ್ನೂ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಆರಿಸಿ ಬಂದಿರುವ ನಮ್ಮ ಪಕ್ಷದ 7 ಶಾಸಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಮಂಗಳಾ ಅಂಗಡಿ ಅವರು, ಅದು ವೈಯಕ್ತಿಕ ವಿಷಯ. ಅದರ ಬಗ್ಗೆ ನಾನು ಹೆಚ್ಚಿಗೆ ಏನೂ ಹೇಳಲ್ಲ. ಅವರು ಗೆಲ್ಲುತ್ತಾರೆಂದು ವೈಯಕ್ತಿಕವಾಗಿ ಹೇಳಿದ್ದೆ, ಅದು ಪಾರ್ಟಿ ವತಿಯಿಂದ ಹೇಳಿದ್ದಲ್ಲ. ಆದರೂ ಸೋಲಾಗಿದೆ ಎಂದರು.