ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಅಕ್ಕೋಳ ಗ್ರಾಮದ ಬೂತ್ ಸಂಖ್ಯೆ 153ರಲ್ಲಿ 51 ಮತಗಳು ಹೆಚ್ಚಿಗೆ ಚಲಾವಣೆಯಾಗಿವೆ. ಮತದಾನ ಮಾಡಿರುವವರಿಗಿಂತ ಇಲ್ಲಿ ಹೆಚ್ಚು ಮತದಾನ ಆಗಿ ಅಕ್ರಮ ನಡೆದಿದ್ದು, ಮರು ಮತದಾನ ನಡೆಸಬೇಕು ಎಂದು ವಿವಿಧ ಪಕ್ಷಗಳ ಏಜೆಂಟರು ಆಗ್ರಹಿಸಿದ್ದಾರೆ.ಈ ಮತಗಟ್ಟೆಯಲ್ಲಿ 898 ಮತದಾರರಲ್ಲಿ 667 ಜನ ಮತದಾನ ಮಾಡಿದ್ದಾರೆ. ಆದರೆ, ಮತಯಂತ್ರದಲ್ಲಿ 718 ಮತಗಳು ಚಲಾವಣೆಯಾದ ದಾಖಲೆ ತೋರಿಸಿದೆ. 51 ಹೆಚ್ಚುವರಿ ಮತಗಳು ಹೇಗೆ ಬಂದವು ಎಂಬುದು ತೀವ್ರ ಗೊಂದಲಕ್ಕೆ ಕಾರಣವಾಯಿತು.
ಈ ಸಂದರ್ಭದಲ್ಲಿ ಅಭ್ಯರ್ಥಿಗಳ ಏಜೆಂಟರು ಹಾಗೂ ಮತಗಟ್ಟೆ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. 153 ಸಂಖ್ಯೆಯ ಬೂತ್‍ನಲ್ಲಿ ಮತ್ತೊಮ್ಮೆ ಮತದಾನ ನಡೆಸಬೇಕೆಂದು ಬಿಜೆಪಿ, ಕಾಂಗ್ರೆಸ್ ಹಾಗೂ ಎನ್‍ಸಿಪಿ ಅಭ್ಯರ್ಥಿಗಳು ಪಟ್ಟು ಹಿಡಿದಿದ್ದಾರೆ . ಎಲ್ಲರನ್ನೂ ಸಮಾಧಾನ ಮಾಡಿದ ಮತಗಟ್ಟೆ ಅಧಿಕಾರಿಗಳು, ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.