ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಮೇ 10ರಂದು ನಡೆಯಲಿದ್ದು . ಮತದಾರರ ಮನವೊಲಿಕೆಗೆ ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ.ಅದರ ಜತೆಗೆ ಬೇರೆ ಜಿಲ್ಲೆಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಮತದಾರರನ್ನು ಮತ ಚಲಾವಣೆಗೆ ಕರೆತರಲು ಈಗಲೇ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಸಾರಿಗೆ ಉದ್ಯಮ ಚಿಗಿತುಕೊಂಡಿದ್ದು, ಮತದಾನದ ದಿನದಂದು ಮತದಾರರನ್ನು ಕರೆತರಲು ರಾಜಕೀಯ ಪಕ್ಷ, ಮುಖಂಡರಿಂದ ಖಾಸಗಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರಮುಖವಾಗಿ ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿನ ಅಭ್ಯರ್ಥಿಗಳು ಬೆಂಗಳೂರಿನಲ್ಲಿರುವ ಮತದಾರರನ್ನು ಈಗಾಗಲೇ ಸಂಪಕಿ೯ಸಿ ಮತದಾನ ಮಾಡಲು ತಾವೇ ಕರೆದುಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದ್ದಾರೆ. ಹೀಗಾಗಿಯೇ ಬಸ್ ಹಾಗೂ ಮಿನಿ ಬಸ್ ಸೇರಿ ಇನ್ನಿತರ ವಾಹನಗಳಿಗೆ ಬೇಡಿಕೆ ಹೆಚ್ಚಿದ್ದು, 6 ಸಾವಿರಕ್ಕೂ ಹೆಚ್ಚಿನ ವಾಹನಗಳನ್ನು ಮುಂಗಡ ಬುಕಿಂಗ್ ಮಾಡಲಾಗಿದೆ.