
ಬೆಳಗಾವಿಯ ಕಂಗ್ರಾಳಿ ಕೆ.ಎಚ್. ಮತ್ತು ಕಂಗ್ರಾಳಿ ಬಿ.ಕೆ. ಗ್ರಾಮಗಳಲ್ಲಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ರೋಡ್ ಶೋ ಮೂಲಕ ಮಂಗಳವಾರ ಚುನಾವಣೆ ಪ್ರಚಾರ ನಡೆಸಿದರು. ‘ನಾನು ರೋಡ್ ಶೋ ನಡೆಸುತ್ತಿರುವ ರಸ್ತೆಗಳನ್ನು ನಾನೇ ಮಾಡಿಸಿದ್ದೇನೆ.ನೀವು ಕೇಳಿದ ಕೆಲಸವನ್ನೆಲ್ಲ ಮಾಡಿಸಿಕೊಟ್ಟಿದ್ದೇನೆ ಹಾಗಾಗಿ ನಿಮ್ಮಲ್ಲಿ ಮತ ಕೇಳುವ ಹಕ್ಕು ನನಗಿದೆ. ನೀವೂ ಅಷ್ಟೇ ಪ್ರೀತಿಯಿಂದ ಕಳೆದ 5 ವರ್ಷದಿಂದಲೂ ನನ್ನೊಂದಿಗಿದ್ದೀರಿ. ಮುಂದಿನ ದಿನಗಳಲ್ಲಿ ಇನ್ನಷ್ಟು ವೆಗದಿಂದ ಅಭಿವೃದ್ಧಿ ಕೆಲಸ ಮಾಡೋಣ. ನನಗೆ ಮತ್ತೆ ಅವಕಾಶ ಕೊಡಿ’ ಎಂದು ಗ್ರಾಮದ ಗಲ್ಲಿಗಳಲ್ಲಿ ಸಂಚರಿಸಿ ಚುನಾವಣೆ ಪ್ರಚಾರ ನಡೆಸಿದರು.
‘ರಾಜಹಂಸಘಡ ಕೋಟೆಯನ್ನು ಅಭಿವೃದ್ಧಿ ಪಡಿಸಬೇಕು. ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಬೇಕು ಎಂಬ ಕನಸಿತ್ತು. ಕರ್ತವ್ಯ ಪ್ರಜ್ಞೆಯಿಂದ ಅದನ್ನು ನೆರವೇರಿಸಿದ್ದೇನೆ. ಆದರೆ ಕೆಲವರು ಅದನ್ನು ರಾಜಕೀಯಗೊಳಿಸಲು ಯತ್ನಿಸಿದರು. ಕ್ಷೇತ್ರದ ಜನರೆಲ್ಲರೂ ಅದನ್ನು ಅರ್ಥಮಾಡಿಕೊಂಡು ನನ್ನ ಬೆನ್ನಿಗೆ ನಿಂತಿದ್ದೀರಿ. ಈ ಬಾರಿಯೂ ಆಶೀರ್ವಾದ ಮಾಡಿ. ಇನ್ನಷ್ಟು ಕೆಲಸ ಮಾಡುತ್ತೇನೆ’ ಎಂದೂ ಹೇಳಿದರು.ಗ್ರಾಮದ ಹಲವು ಪುರುಷರು, ಮಹಿಳೆಯರು ಕೂಡ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.