ರಾಜ್ಯ ಸರ್ಕಾರ 2ಬಿ ಮೀಸಲಾತಿ ರದ್ದು ಮಾಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2ಬಿ ಮೀಸಲಾತಿ ರದ್ದು ಮಾಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದರೆ ಸಾಲದು, ಆದೇಶವನ್ನೇ ರದ್ದು ಮಾಡಬೇಕು ಎಂದರು.
ಮೀಸಲಾತಿ ವಿಚಾರದಲ್ಲಿ ಇದೊಂದು ಅಸ್ವಾಭಾವಿಕೆ ಜನನವಾಗಿತ್ತು ಈಗ ಅಸ್ವಾಭಾವಿಕ ಸಾವು ಆಗಿದೆ ಅಷ್ಟೆ. ನಾವು ಬಸವಣ್ಣ ಅವರ ತತ್ವ ಸಿದ್ದಾಂತಗಳ ಮೇಲೆ ನಂಬಿಕೆಯುಳ್ಳವರು. ಹಿಂದುಳಿದ ಸಮಾಜ ನಮ್ಮದು. ನ್ಯಾಯಾಲಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ವಿಚಾರದಲ್ಲಿ ಬಿಜೆಪಿಗೆ ಯಾವತ್ತೋ ಹಿನ್ನಡೆ ಆಗಿದೆ. ಹೈಕಮಾಂಡ್ ಯಾತ್ರೆ ಮಾಡುವ ಮೂಲಕ ಮತ ಕೇಳುತ್ತಿದೆ ಎಂದು ಟೀಕಿಸಿದರು.
ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಅವರಿಗೆ ಧರ್ಮ ಏನು ಅನ್ನೋದೆ ಗೊತ್ತಿಲ್ಲ. ರಾಜಸ್ಥಾನ, ಚತ್ತಿಸಘಡದಲ್ಲಿ ಯಾಕೆ ಈ ರೀತಿ ಮೀಸಲಾತಿ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಮೀಸಲಾತಿ ಕೊಟ್ಟಿರೋದು ಜೆಡಿಎಸ್ ಸರ್ಕಾರ ಒಂದೇ ಎಂದು ಸಮರ್ಥಿಸಿಕೊಂಡರು.
ಬಿಜೆಪಿ ಒಂದಲ್ಲ ಅನೇಕ ಮಸೂದೆಗಳಲ್ಲಿ ಈ ರೀತಿಯ ಹುಡುಗಾಟವನ್ನ ಮಾಡಿದೆ. ಬಿಜೆಪಿಯವರಿಗೆ ಗುರಿಯೂ ಇಲ್ಲ. ಗುರುವು ಇಲ್ಲ. ಮುಂದಿನ ದೆಸೆಯ ಬಗ್ಗೆ ಅರಿವಿಲ್ಲ. ಬಸವರಾಜ್ ಬೊಮ್ಮಾಯಿ ಅವರನ್ನ ಮುಖ್ಯಮಂತ್ರಿಯಾಗಿ ಕೂರಿಸಿಕೊಂಡು ಹಿಂದಿನಿಂದ ಕೆಲವರು ಈ ರೀತಿಯಾದ ಕೆಲಸವನ್ನ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.