ಪರಿಶಿಷ್ಟ ಜಾತಿ, ಪಂಗಡದ ಅನುದಾನ ದುರ್ಬಳಕೆ ಖಂಡಿಸಿ ಸೋಮವಾರ ಕಂಗ್ರಾಳಿ ಬಿ.ಕೆ. ಗ್ರಾ.ಪಂ. ಕಚೇರಿಗೆ ಬೀಗ ಜಡಿದು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಧರಣಿ ನಡೆಸಿದರು.
ಗ್ರಾಮದ ಅಂಬೇಡ್ಕರ್ ಗಲ್ಲಿಗೆ ಅನುದಾನ ನೀಡದೇ, ಬೇರೆ ಬೇರೆ ವಾರ್ಡಗಳಲ್ಲಿ ಅನುದಾನ ಬಳಸಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಗ್ರಾ. ಪಂ. ಕಚೇರಿಗೆ ಬೀಗ ಹಾಕಿ, ಪಿಡಿಓ ಹಾಗೂ ಕೆಲ ಗ್ರಾ.ಪಂ. ಸದಸ್ಯರ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನೋಂದಣಿ ಕಂಪ್ಯೂಟರ್ ಉತಾರ, ಮನೆ ಕಟ್ಟಲು ಪರವಾನಿಗೆ ಪತ್ರ, ಅಂಗಡಿ ಲೈಸೆನ್ಸ್, ಆಸ್ತಿ ವರ್ಗಾವಣೆ ಇವುಗಳನ್ನು ಸಾಮಾನ್ಯ ಸಭೆಯಲ್ಲಿ ಪ್ರೋಸಿಡಿಂಗ್ ಠರಾವು ಇಲ್ಲದೇ ಯಾವ ಆಧಾರದಲ್ಲಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಪಿಡಿಓ ಸರಿಯಾದ ಸಮಯಕ್ಕೆ ಪಂಚಾಯಿತಿಗೆ ಬರುವುದಿಲ್ಲ. ಸರಕಾರದ ಯೋಜನೆಗಳು ಹಾಗೂ ಸಭೆಯ ಕುರಿತು ಸದಸ್ಯರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಹೀಗಾಗಿ ತಕ್ಷಣವೇ ಇವರನ್ನು ಅಮಾನತ್ತುಗೊಳಿಸಿ ಪ್ರಾಮಾಣಿಕ ಪಿಡಿಓ ನೇಮಕ ಮಾಡಬೇಕು ಮತ್ತು ನೂತನ ಕಾರ್ಯದರ್ಶಿಯನ್ನೂ ನೇಮಕ ಮಾಡುವಂತೆ ಆಗ್ರಹಿಸಲಾಯಿತು