ಹೊಸ ದೆಹಲಿ: ಬಾಲಿವುಡ್ ಜನಪ್ರಿಯ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ದಳವು (Special Cell) ಭಾರಿ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿ, ಕುಖ್ಯಾತ ಶಸ್ತ್ರಾಸ್ತ್ರ ಕಳ್ಳಸಾಗಣೆ ಸಿಂಡಿಕೇಟ್ ಅನ್ನು ಭೇದಿಸಿದೆ. ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಮೂಲದ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದೇಶದ ವಿವಿಧ ಭಾಗಗಳಿಗೆ ಅಕ್ರಮ ಬಂದೂಕುಗಳನ್ನು ಪೂರೈಸುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ.
ರಾದಾ ಮತ್ತು ಬಬೀತಾ ಟ್ರೇನ್ ಮೂಲಕ ಪಿಸ್ತೂಲ್ ಸಾಗಿಸಿದ್ದರು:
ಪೊಲೀಸ್ ತನಿಖೆಯಿಂದ ಮಹತ್ವದ ವಿಚಾರಗಳು ಹೊರಬಂದಿದ್ದು, ಬಂಧಿತ ಮಹಿಳೆಯರನ್ನು ಉತ್ತರ ಪ್ರದೇಶದ ರಾದಾ ಮತ್ತು ಬಬೀತಾ ಎಂದು ಗುರುತಿಸಲಾಗಿದೆ. ಟೈಗರ್ ಶ್ರಾಫ್ ಪ್ರಕರಣದ ಶೂಟರ್ಗಳಿಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ತಲುಪಿಸಿದ್ದೇ ಈ ಇಬ್ಬರು ಎಂದು ಆರೋಪಿಸಲಾಗಿದೆ. ಯಾವುದೇ ಅನುಮಾನ ಬಾರದಂತೆ ಅತ್ಯಂತ ಚಾಣಕ್ಷತನದಿಂದ ಈ ಮಹಿಳೆಯರು ರೈಲು ಮೂಲಕ ಮುಂಬೈಗೆ ಶಸ್ತ್ರಾಸ್ತ್ರಗಳನ್ನು ತಲುಪಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸೋನಿಪತ್ನ ಇಬ್ಬರು ಯುವಕರು ಪೊಲೀಸರ ವಶಕ್ಕೆ:
ಉತ್ತರ ಪ್ರದೇಶದ ಈ ಇಬ್ಬರು ಮಹಿಳೆಯರಲ್ಲದೆ, ವಿಶೇಷ ದಳವು ಹರಿಯಾಣದ ಸೋನಿಪತ್ನಿಂದ ಇಬ್ಬರು ಯುವಕರನ್ನು ಸಹ ವಶಕ್ಕೆ ತೆಗೆದುಕೊಂಡಿದೆ. ಪೊಲೀಸರ ಪ್ರಕಾರ, ಈ ಯುವಕರು ಕೂಡ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲದ ಪ್ರಮುಖ ಕೊಂಡಿಯಾಗಿದ್ದು, ಅಪರಾಧಿಗಳಿಗೆ ನಿರಂತರವಾಗಿ ಬಂದೂಕುಗಳನ್ನು ಒದಗಿಸುತ್ತಿದ್ದರು.
“ಬಂಧಿತ ಎಲ್ಲ ನಾಲ್ವರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಿಂಡಿಕೇಟ್ನ ಇತರ ಸಹಚರರು ಯಾರು ಮತ್ತು ಶಸ್ತ್ರಾಸ್ತ್ರಗಳ ಮೂಲ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದಿನ ತನಿಖೆ ಚುರುಕು:
ಮುಂಬೈಗೆ ಈ ಶಸ್ತ್ರಾಸ್ತ್ರಗಳನ್ನು ಯಾರ ಸೂಚನೆ ಮತ್ತು ಯಾವ ಉದ್ದೇಶಕ್ಕಾಗಿ ಕಳುಹಿಸಲಾಗಿತ್ತು ಎಂಬ ಬಗ್ಗೆ ಸ್ಪಷ್ಟನೆ ಪಡೆಯಲು ಪೊಲೀಸರು ಈಗ ನಾಲ್ವರು ಆರೋಪಿಗಳನ್ನು ಮುಖಾಮುಖಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬೃಹತ್ ಬೆಳವಣಿಗೆಯಿಂದ ಬಾಲಿವುಡ್ ಅಂಗಳ ಹಾಗೂ ಅಂಡರ್ವರ್ಲ್ಡ್ ನಂಟಿನ ಕುರಿತು ಭದ್ರತಾ ಏಜೆನ್ಸಿಗಳು ಮತ್ತೊಮ್ಮೆ ಹೈ ಅಲರ್ಟ್ ಘೋಷಿಸಿವೆ.