ಸತಾರಾ: ಅಚಲ ಶ್ರದ್ಧೆ ಹಾಗೂ ಅಸಾಧಾರಣ ದೈಹಿಕ ಸಹಿಷ್ಣುತೆಯ ಅಪರೂಪದ ನಿದರ್ಶನವೊಂದರಲ್ಲಿ, ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಾಯ್ ತಾಲೂಕಿನ ಪಾಂಡೆ ಗ್ರಾಮದ ನೂರಕ್ಕೂ ಹೆಚ್ಚು ಪುರುಷರು 350 ವರ್ಷಗಳ ಐತಿಹಾಸಿಕ 'ಉಭ್ಯಾಚಿ ನವರಾತ್ರಿ' (ನಿಂತುಕೊಂಡೇ ಆಚರಿಸುವ ನವರಾತ್ರಿ) ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಸತತ ಒಂಭತ್ತು ದಿನಗಳ ಕಾಲ ಇವರು ಕುಳಿತುಕೊಳ್ಳದೆ ಅಥವಾ ನೆಲದ ಮೇಲೆ ಮಲಗದೆ ಕಠಿಣ ವ್ರತ ಆಚರಿಸುತ್ತಿದ್ದಾರೆ.
ಪವಿತ್ರ ಕಾಳಭೈರವನಾಥ ದೇವಸ್ಥಾನದ ಆವರಣದಲ್ಲಿ ಜಮಾಯಿಸಿರುವ ಈ ಭಕ್ತರನ್ನು ಸ್ಥಳೀಯವಾಗಿ 'ನವರತ್ಕಾರಿ' ಎಂದು ಕರೆಯಲಾಗುತ್ತದೆ. ಇವರ ವಯಸ್ಸು 18 ರಿಂದ 65 ವರ್ಷಗಳ ನಡುವೆ ಇದೆ. ಈ ಪ್ರಾಚೀನ ಆಚರಣೆಯು ಸಂಪೂರ್ಣ ಸಮರ್ಪಣಾಭಾವವನ್ನು ಬೇಡುತ್ತದೆ. ದೇಶದ ವಿವಿಧ ಭಾಗಗಳಿಂದ ಸ್ವಗ್ರಾಮಕ್ಕೆ ಆಗಮಿಸುವ ಗ್ರಾಮಸ್ಥರು, ವಿಶೇಷವಾಗಿ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರು ಸಹ ವಾರ್ಷಿಕ ರಜೆ ಪಡೆದು ಈ ಕಠಿಣ ವ್ರತದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಠಿಣ ನಿಯಮಗಳು ಮತ್ತು ಪವಿತ್ರ ಹರಕೆ:
ಗ್ರಾಮದ ದೇವತೆಯಾದ ಕಾಳಭೈರವನಾಥನಿಗೆ ಇಷ್ಟಾರ್ಥ ಸಿದ್ಧಿಗಾಗಿ ಅಥವಾ ಸಂಕಷ್ಟ ನಿವಾರಣೆಗಾಗಿ ಕೈಗೊಳ್ಳುವ 'ನವಾಸ್' (ಹರಕೆ) ಆಚರಣೆಯ ಭಾಗವಾಗಿ ಇದು ರೂಢಿಯಲ್ಲಿದೆ. ಪಾಂಡೆ ಗ್ರಾಮದಲ್ಲಿ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದಂತೆ, ಪಾಲ್ಗೊಳ್ಳುವ ಪ್ರತಿ ಕುಟುಂಬದಿಂದ ಕನಿಷ್ಠ ಒಬ್ಬ ಪುರುಷ ಸದಸ್ಯನಾದರೂ ಈ ಕಠಿಣ ವ್ರತವನ್ನು ಪೂರೈಸುತ್ತಾನೆ.
"ಭಕ್ತರು 3, 5, 7, 10 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಈ ನಿರಂತರ ನಿಲ್ಲುವ ವ್ರತವನ್ನು ಆಚರಿಸುವುದಾಗಿ ಹರಕೆ ಹೊರುತ್ತಾರೆ. ಇದು ಪಾಂಡೆ ಗ್ರಾಮದಲ್ಲಿ ತಲೆಮಾರುಗಳಿಂದ ಬಂದಿರುವ ತೀವ್ರ ಆಧ್ಯಾತ್ಮಿಕ ಬದ್ಧತೆಯಾಗಿದೆ" ಎಂದು ಕಾಳಭೈರವನಾಥ ದೇವಸ್ಥಾನ ಸಮಿತಿಯ ಅಧ್ಯಕ್ಷ ಹೇಮಂತ್ ಜಾಧವ್ ತಿಳಿಸಿದ್ದಾರೆ.
ವಿಶಿಷ್ಟ 'ಚೌಫಾಲಾ' ವಿಶ್ರಾಂತಿ ವ್ಯವಸ್ಥೆ:
216 ಗಂಟೆಗಳಿಗೂ ಹೆಚ್ಚು ಕಾಲ ನಿರಂತರವಾಗಿ ನಿಲ್ಲುವುದರಿಂದ ಉಂಟಾಗುವ ತೀವ್ರ ದೈಹಿಕ ಆಯಾಸವನ್ನು ತಡೆಯಲು, ದೇವಸ್ಥಾನದ ಆಡಳಿತ ಮಂಡಳಿಯು ಮರದ ತೊಲೆಗಳಿಗೆ 'ಚೌಫಾಲಾ' ಎಂದು ಕರೆಯಲ್ಪಡುವ ವಿಶೇಷ ಬಟ್ಟೆಯ ತೊಟ್ಟಿಲುಗಳನ್ನು ತೂಗುಹಾಕಿದೆ. ಮೈಯೆಲ್ಲಾ ಸುಸ್ತಾದಾಗ ಭಕ್ತರು ತಮ್ಮ ಎದೆಯನ್ನು ಈ ತೂಗಾಡುವ ಆಸರೆಗೆ ಒರಗಿಸಿ ಸ್ವಲ್ಪ ವಿಶ್ರಾಂತಿ ಪಡೆಯುತ್ತಾರೆ. ಆದರೆ ಈ ವೇಳೆಯೂ ಅವರ ಕಾಲುಗಳು ನೆಲದ ಮೇಲೆಯೇ ಇರುತ್ತವೆ ಎಂಬುದು ವಿಶೇಷ.
ಕಾಲುಗಳಲ್ಲಿ ತೀವ್ರ ನೋವು ಮತ್ತು ದೇಹದ ಆಯಾಸವಿದ್ದರೂ, ಗ್ರಾಮಸ್ಥರ ಭಕ್ತಿ ಮಾತ್ರ ಅಚಲವಾಗಿದೆ. ಮಹಾರಾಷ್ಟ್ರದ ಹಬ್ಬದ ಸೀಸನ್ನಲ್ಲಿ ಪಾಂಡೆ ಗ್ರಾಮದ ಈ 'ಉಭ್ಯಾಚಿ ನವರಾತ್ರಿ' ಅತ್ಯಂತ ವಿಶಿಷ್ಟ ಹಾಗೂ ರೋಮಾಂಚಕ ಸಾಂಸ್ಕೃತಿಕ ಪರಂಪರೆಯಾಗಿ ಹೊರಹೊಮ್ಮಿದೆ.