ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯವಾಗಬಾರದು ಎಂದು ಚಿಕ್ಕೋಡಿಯಲ್ಲಿ ಪ್ರತಿಪಾದಿಸಿದ್ದಾರೆ.
CHIKKODI: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸದಾ ಗಟ್ಟಿಯಾಗಿ ನಿಲ್ಲುವುದಾಗಿ ಪ್ರತಿಪಾದಿಸಿರುವ ಮಾಜಿ ಸಚಿವ
ಎಚ್.ಸಿ. ಮಹದೇವಪ್ಪ, ಅಧಿಕಾರ ಇರಲಿ ಅಥವಾ ಇಲ್ಲದಿರಲಿ ತಾವು ಅವರ ಬೆಂಬಲಕ್ಕೆ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷ ಹಾಗೂ ನಾಯಕರ ಮಧ್ಯೆ ಯಾವುದೇ ರೀತಿಯ ಮುನಿಸು ಅಥವಾ ಅಸಮಾಧಾನ ಇಲ್ಲ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.
ತಮ್ಮ ರಾಜಕೀಯ ನಿಲುವನ್ನು ಬಿಚ್ಚಿಟ್ಟ ಮಹದೇವಪ್ಪ,
"ನಾನು ನಗುತ್ತಲೇ ಇದ್ದೇನೆ, ಅತ್ಯಂತ ಖುಷಿಯಾಗಿದ್ದೇನೆ. ಯಾರಿಗೂ ಅಧಿಕಾರ ಎಂಬುದು ಶಾಶ್ವತವಲ್ಲ. ಅಧಿಕಾರದಲ್ಲಿದ್ದಾಗಲೂ ಸಿದ್ದರಾಮಯ್ಯ ಅವರ ಪರ ಇರಬೇಕು, ಅಧಿಕಾರ ಇಲ್ಲದೇ ಇದ್ದಾಗಲೂ ಅವರ ಪರವಾಗಿಯೇ ಇರಬೇಕು"
ಎಂದು ಪುನರುಚ್ಚರಿಸಿದರು. ಇದೇ ವೇಳೆ
ಆಶಾ ಕಾರ್ಯಕರ್ತೆಯರ ಹೋರಾಟದ ಕುರಿತು ಪ್ರಸ್ತಾಪಿಸಿದ ಅವರು,
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಭರವಸೆಯನ್ನು ಈಡೇರಿಸಲಿದ್ದು, ರಾಜ್ಯ ಸರ್ಕಾರದ ಮೇಲೆ ಕಾರ್ಯಕರ್ತೆಯರು ಭರವಸೆ ಇಡಬೇಕು ಎಂದರು.
ಕ್ಷೇತ್ರ ಮರು ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ:
ದೇಶದಲ್ಲಿ ಮುಂಬರುವ ಕ್ಷೇತ್ರ ಮರು ವಿಂಗಡಣೆ (Delimitation) ಹಾಗೂ ಮಹಿಳಾ ಮೀಸಲಾತಿ ಕುರಿತು ಮಾತನಾಡಿದ ಹೆಚ್.ಸಿ. ಮಹದೇವಪ್ಪ,
ಜನಗಣತಿ ಆಧಾರದ ಮೇಲೆಯೇ ಕ್ಷೇತ್ರ ಮರು ವಿಂಗಡಣೆ ನಡೆಯಬೇಕು ಎಂದು ಆಗ್ರಹಿಸಿದರು. ದಕ್ಷಿಣ ಭಾರತದ ರಾಜ್ಯಗಳು
ಕುಟುಂಬ ಯೋಜನೆ (Family Planning) ಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದು ಜನಸಂಖ್ಯೆ ಸ್ಫೋಟವನ್ನು ನಿಯಂತ್ರಿಸಿವೆ. ಆದರೆ ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಕ್ಷೇತ್ರ ವಿಂಗಡಣೆ ಮಾಡುವಾಗ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗದಂತೆ ಕೇಂದ್ರ ಸರ್ಕಾರ ಜಾಗ್ರತೆ ವಹಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಉತ್ತರ ಹಾಗೂ ದಕ್ಷಿಣ ಭಾರತದ ನಡುವೆ ಯಾವುದೇ ತಾರತಮ್ಯವಾಗದಂತೆ ಪ್ರಾತಿನಿಧ್ಯ ನೀಡಬೇಕು ಎಂದ ಅವರು,
"ಮಹಿಳಾ ಮೀಸಲಾತಿ ಮಸೂದೆಯ ಹಿಂದೆ ಕಾಂಗ್ರೆಸ್ ಸರ್ಕಾರದ ಸುದೀರ್ಘ ಶ್ರಮವಿದೆ. ಮಹಿಳಾ ಮೀಸಲಾತಿ ಕಾಂಗ್ರೆಸ್‌ಗೆ ಹೊಸದೇನಲ್ಲ, ಮೊದಲಿನಿಂದಲೂ ಕಾಂಗ್ರೆಸ್ ಪಕ್ಷ ಮಹಿಳಾ ಸಬಲೀಕರಣದ ಪರವಾಗಿದೆ"
ಎಂದರು.
ಸಿಜೆಐ ಗವಾಯಿ ಹೇಳಿಕೆಗೆ ಸ್ವಾಗತ:
ನ್ಯಾಯಮೂರ್ತಿ ಗವಾಯಿ ಅವರ ಪ್ರಜಾಪ್ರಭುತ್ವ ಮತ್ತು ಸಮಾನತೆಯ ಕುರಿತಾದ ಪತ್ರ ಹಾಗೂ ಹೇಳಿಕೆಯನ್ನು ಹೆಚ್.ಸಿ. ಮಹದೇವಪ್ಪ ಮುಕ್ತವಾಗಿ ಸ್ವಾಗತಿಸಿದರು. ಭಾರತದ ಪ್ರಜಾಪ್ರಭುತ್ವವು ಸ್ವಾತಂತ್ರ್ಯ ಮತ್ತು ಸಮಾನತೆಯ ಬಲವಾದ ಬಡಿಪಾಯದ ಮೇಲೆ ನಿಂತಿದೆ ಎಂದು ಅವರು ಅಭಿಪ್ರಾಯಪಟ್ಟರು.
"ನಮಗೆ ರಾಜಕೀಯ ಸ್ವಾತಂತ್ರ್ಯ ದೊರೆತಿದೆ, ಆದರೆ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಎಲ್ಲ ವರ್ಗದವರಿಗೂ ಸಂಪೂರ್ಣ ಸ್ವಾತಂತ್ರ್ಯ ಮತ್ತು ಸಮಾನತೆ ಇನ್ನೂ ಸಿಕ್ಕಿಲ್ಲ. ಸಮಾಜದ ಪ್ರತಿಯೊಂದು ವರ್ಗಕ್ಕೂ ನಿರ್ದಿಷ್ಟ ಮತ್ತು ಸೂಕ್ತ ಪ್ರಾತಿನಿಧ್ಯ ಸಿಗಬೇಕಾದ ಅಗತ್ಯವಿದೆ. ಅದಕ್ಕಾಗಿಯೇ ನಾವು ಭಾರತೀಯ ಸಂವಿಧಾನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತೇವೆ"
ಎಂದು ಮಹದೇವಪ್ಪ ತಿಳಿಸಿದರು.