ಬೆಳಗಾವಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ತಲವಾರ್ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿ ಬಂಧನ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದ ಮತ್ತೊಬ್ಬನ ಮೇಲೆ ಕೇಸ್ ದಾಖಲು.
ಬೆಳಗಾವಿ: ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಳಗಾವಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಾರ್ಕೆಟ್ ಹಾಗೂ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ಹರಿತವಾದ
ತಲವಾರ್ ಹಿಡಿದು ಸಂಚರಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದ ಮತ್ತೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದಿನಾಂಕ
೨೭/೧೧/೨೦೨೬ ರಂದು ಸ್ಟಾಬಿಂಗ್ ಪ್ರಕರಣಗಳನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಮಾರ್ಕೆಟ್ ಪೊಲೀಸ್ ಠಾಣೆಯ ವಿಶೇಷ 'ಆಂಟಿ ಸ್ಟಾಬಿಂಗ್ ಸ್ಕ್ಯಾಡ್' ತಂಡವು ಸ್ವೀಕಾರ ಹೋಟೆಲ್ ಹಾಗೂ ಸೆಂಟ್ರಲ್ ಬಸ್ ನಿಲ್ದಾಣದ ಸುತ್ತಮುತ್ತ ತೀವ್ರ ತಪಾಸಣೆ ಕೈಗೊಂಡಿತ್ತು.
ತಲವಾರ್ ಜತೆ ಸಿಕ್ಕಿಬಿದ್ದ ಆರೋಪಿ:
ಪರಿಶೀಲನೆ ವೇಳೆ ಯಾವುದೋ ಗಂಭೀರ ಅಪರಾಧಿಕ ಕೃತ್ಯವೆಸಗುವ ಉದ್ದೇಶದಿಂದ ಹರಿತವಾದ ತಲವಾರ್ ಹಿಡಿದು ಓಡಾಡುತ್ತಿದ್ದ ಘೀ ಗಲ್ಲಿಯ ನಿವಾಸಿ
ಮಹಮ್ಮದಬಿಲಾಲ ಸಫರರಾಜ ಪಠಾಣ (೨೩) ಎಂಬಾತನನ್ನು ಪಿಎಸ್‌ಐ ಹುಸೇನ್ ಕೆರೂರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿರುದ್ಧ
ಆರ್ಮ್ಸ್ ಆಕ್ಟ್ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ:
ಮತ್ತೊಂದೆಡೆ, ಎಪಿಎಂಸಿ ಠಾಣಾ ವ್ಯಾಪ್ತಿಯ ವೈಭವ ನಗರದ ಬಳಿ ಸಾರ್ವಜನಿಕ ಸ್ಥಳದಲ್ಲಿಯೇ ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಸತ್ಯಸಾಯಿ ಕಾಲನಿಯ
ತನ್ವಿರ ಖಾಸೀಂಸಾಬ ಸಯ್ಯದ (೨೩) ಎಂಬಾತನ ಮೇಲೆ ಪಿಎಸ್‌ಐ ವಿಠಲ ಹಾವನ್ನವರ ನೇತೃತ್ವದ ತಂಡ ದಾಳಿ ನಡೆಸಿದೆ. ಆರೋಪಿ ವಿರುದ್ಧ
ಅಬಕಾರಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ.
"ನಗರದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಪೊಲೀಸರು ಬದ್ಧರಾಗಿದ್ದು, ಇಂತಹ ಸಮಾಜಘಾತಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಮುಂದುವರಿಯಲಿದೆ."
ಈ ಎರಡೂ ಸಮರ್ಥ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯಯ ಕಾರ್ಯವೈಖರಿಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ವಿಶೇಷವಾಗಿ ಶ್ಲಾಘಿಸಿದ್ದಾರೆ.