ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ (ಕೆಪಿವೈಸಿ) ವತಿಯಿಂದ ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ 'ವಿಶ್ವ ನಿರುದ್ಯೋಗ ದಿನ'ವಾಗಿ ವಿಭಿನ್ನವಾಗಿ ಆಚರಿಸಲಾಯಿತು. ಕೇಂದ್ರ ಸರ್ಕಾರದ ಉದ್ಯೋಗ ಸೃಷ್ಟಿ ವೈಫಲ್ಯವನ್ನು ಖಂಡಿಸಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಮೆಲಡಿ ಚಾಕೊಲೇಟ್‌ಗಳನ್ನು ಹಂಚುವ ಮೂಲಕ ಮತ್ತು ವ್ಯಂಗ್ಯಚಿತ್ರಗಳುಳ್ಳ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ ಗೌಡ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರವು ಯುವಜನರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನೇಮಕಾತಿ ವಿಳಂಬದಿಂದಾಗಿ ಉದ್ಯೋಗಾಕಕ್ಷಿಗಳು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಅವರು ಆರೋಪಿಸಿದರು.
ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ:
"ದೇಶದ ಯುವ ಸಮುದಾಯಕ್ಕೆ ಉದ್ಯೋಗ ನೀಡಲು ವಿಫಲವಾಗಿರುವ ಸರ್ಕಾರವು ದೇಶದ ಭವಿಷ್ಯವನ್ನು ಹೇಗೆ ರೂಪಿಸಲು ಸಾಧ್ಯ? ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗಿರುವ ಪ್ರಧಾನಿ ಮೋದಿಯವರನ್ನು ಮುಂದಿನ ಪೀಳಿಗೆಯು 'ನಿರುದ್ಯೋಗದ ಪಿತ್ರು' (Father of Unemployment) ಎಂದು ಕರೆಯುವುದು ಖಚಿತ," ಎಂದು ಮಂಜುನಾಥ ಗೌಡ ತೀವ್ರ ಪದಗಳಲ್ಲಿ ವಾಗ್ದಾಳಿ ನಡೆಸಿದರು.
ನೀತಿ ಆಯೋಗದ 'ರೀಇಮ್ಯಾಜಿನಿಂಗ್ ಸ್ಕಿಲ್ಲಿಂಗ್ ಫಾರ್ ವಿಕಸಿತ ಭಾರತ @2047' ವರದಿಯ ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ 15 ರಿಂದ 29 ವರ್ಷ ವಯಸ್ಸಿನ ಸುಮಾರು 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಹಾಗೂ ಯಾವುದೇ ಕೌಶಲ್ಯ ತರಬೇತಿಯಿಲ್ಲದೆ ಬೀದಿಯಲ್ಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲದೆ, ಮಾಹಿತಿ ಹಕ್ಕು ಕಾಯ್ದೆಯ (RTI) ಅಡಿಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರದ 80 ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 8.23 ಲಕ್ಷಕ್ಕೂ ಅಧಿಕ ನಾಗರಿಕ ಹುದ್ದೆಗಳು ಖಾಲಿ ಬಿದ್ದಿವೆ ಎಂದು ಅವರು ಅಂಕಿಅಂಶಗಳನ್ನು ಬಿಚ್ಚಿಟ್ಟರು.
ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿದ್ದ ನೂರಾರು ಯುವ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಕಳೆದ 11 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಾಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದಿಿವ್ಯಾ, ಜಿಲ್ಲಾ ಅಧ್ಯಕ್ಷರಾದ ರಂಜಿತ್, ರಾಹುಲ್, ಪ್ರವೀಣ್ ಸೇರಿದಂತೆ ಹಲವು ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.