ಬೆಳಗಾವಿ ಜಿಲ್ಲೆಯ ಅಥಣಿ ಶಾಸಕ ಲಕ್ಷ್ಮಣ್ ಸವದಿ ಆಪ್ತ, RSS ಕಾರ್ಯಕರ್ತ ಸುಶೀಲಕುಮಾರ್‌ಗೆ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಹುದ್ದೆ ನೀಡಿದ್ದಕ್ಕೆ ಕಾಂಗ್ರೆಸ್ ಪಡೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
BELAGAVI: ರಾಜ್ಯ ಸರ್ಕಾರದ ಬಹುನಿರೀಕ್ಷಿತ ನಿಗಮ ಮಂಡಳಿ ನಿರ್ದೇಶಕರ ಹುದ್ದೆಗಳ ನೇಮಕಾತಿ ಪಟ್ಟಿ ಹೊರಬಿದ್ದ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಂಗಳದಲ್ಲಿ ಅಸಮಾಧಾನದ ಕಿಡಿ ಹೊತ್ತಿಕೊಂಡಿದೆ. ಅಥಣಿ ಶಾಸಕ
ಲಕ್ಷ್ಮಣ್ ಸವದಿ ಅವರ ತೀವ್ರ ಶಿಫಾರಸಿನ ಮೇರೆಗೆ,
ಆರ್‌ಎಸ್‌ಎಸ್ (RSS) ಸಕ್ರಿಯ ಕಾರ್ಯಕರ್ತ ಸುಶೀಲಕುಮಾರ್ ಪತ್ತಾರ್ ಅವರಿಗೆ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಹುದ್ದೆ ನೀಡಿರುವುದು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವಿಕ್ರಮಪುರ ಗ್ರಾಮದ ನಿವಾಸಿಯಾಗಿರುವ ಸುಶೀಲಕುಮಾರ್ ಪತ್ತಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿನ್ನೆಲೆಯುಳ್ಳವರಾಗಿದ್ದು, ಶಾಸಕ ಲಕ್ಷ್ಮಣ್ ಸವದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜಾಪುರ ಮತ್ತು ಬೆಳಗಾವಿ ಭಾಗದಲ್ಲಿ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗಿನಿಂದಲೂ ಅವರ ಜೊತೆ ಕಾರ್ಯನಿರ್ವಹಿಸುತ್ತಿದ್ದ ಸುಶೀಲಕುಮಾರ್ ಅವರಿಗೆ ಈಗ ಅಧಿಕಾರ ಹಂಚಿಕೆಯಲ್ಲಿ ಪ್ರಮುಖ ಸ್ಥಾನ ಸಿಕ್ಕಿರುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ ಸವದಿ?:
ಪಕ್ಷದ ಅಧಿಕಾರಾವಧಿಯಲ್ಲಿ ನಿಗಮ ಮಂಡಳಿ ಹುದ್ದೆಗಳನ್ನು ನಿರೀಕ್ಷಿಸುತ್ತಿದ್ದ ಮೂಲ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಈ ನಿರ್ಧಾರದಿಂದ ಕಂಗಾಲಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರನ್ನು ಬದಿಗೊತ್ತಿ, ಆರ್‌ಎಸ್‌ಎಸ್ ಹಿನ್ನೆಲೆಯುಳ್ಳ ನಾಯಕನಿಗೆ ಮಣೆ ಹಾಕಿರುವುದಕ್ಕೆ ಅಥಣಿ ಹಾಗೂ ಬೆಳಗಾವಿ ಭಾಗದ ಸ್ಥಳೀಯ ಕೈ ನಾಯಕರು ಬಹಿರಂಗವಾಗಿಯೇ ಅಪಸ್ವರ ಎತ್ತಿದ್ದಾರೆ.
"ವರ್ಷಗಳಿಂದ ಪಕ್ಷದ ಸಿದ್ಧಾಂತ ನೆಚ್ಚಿಕೊಂಡು ದುಡಿದ ಎಷ್ಟೋ ಕಾರ್ಯಕರ್ತರು ಸೂಕ್ತ ಸ್ಥಾನಮಾನವಿಲ್ಲದೆ ಕಾಯುತ್ತಿದ್ದಾರೆ. ಆದರೆ, ಇತ್ತೀಚೆಗೆ ಬಂದ ಶಾಸಕರು ತಮ್ಮ ಆರ್‌ಎಸ್‌ಎಸ್ ಹಿನ್ನೆಲೆಯ ಬೆಂಬಲಿಗರಿಗೆ ಸರ್ಕಾರದ ಪ್ರಮುಖ ಹುದ್ದೆ ಕೊಡಿಸುತ್ತಿರುವುದು ಪಕ್ಷದ ಮೂಲ ತತ್ತ್ವಕ್ಕೇ ವಿರುದ್ಧವಾಗಿದೆ." — ಹೆಸರು ಹೇಳಲಿಚ್ಛಿಸದ ಬೆಳಗಾವಿ ಕಾಂಗ್ರೆಸ್ ಮುಖಂಡ
ಮೇಲಾಧಿಕಾರಿಗಳ ಕದ ತಟ್ಟಲು ಸಿದ್ಧತೆ:
ಈ ವಿವಾದಾತ್ಮಕ ನೇಮಕಾತಿಯು ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯವನ್ನು ಮತ್ತಷ್ಟು ಕಾಯಿಸಿದೆ. ಲಕ್ಷ್ಮಣ್ ಸವದಿ ಅವರ ಏಕಪಕ್ಷೀಯ ತೀರ್ಮಾನ ಮತ್ತು ತಮ್ಮ ಆಪ್ತರಿಗೆ ಮಣೆ ಹಾಕುವ ಧೋರಣೆಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದೂರು ನೀಡಲು ಸ್ಥಳೀಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಈ ಬಂಡಾಯದ ಕಾವು ಕಾಂಗ್ರೆಸ್‌ಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸುವ ಸಾಧ್ಯತೆಯಿದೆ.