ಬೆಳಗಾವಿಯಲ್ಲಿ ಕೆಪಿಎಸ್ಸಿ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ಜಿಲ್ಲಾಡಳಿತ ಬಿಗಿ ಸಿದ್ಧತೆ ನಡೆಸಿದ್ದು, 34 ಕೇಂದ್ರಗಳಲ್ಲಿ 12,244 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
BELAGAVI: ರಾಜ್ಯಾದ್ಯಂತ ನಡೆಯಲಿರುವ ಕೆಪಿಎಸ್ಸಿ (KPSC) ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ಬೆಳಗಾವಿ ಜಿಲ್ಲಾಡಳಿತ ಹಾಗೂ ನಗರ ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದ್ದು, ಅಕ್ರಮ ತಡೆಗೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ
ಮೊಹಮ್ಮದ್ ರೋಷನ್ ಹಾಗೂ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆದಿದ್ದು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ.
ಬೆಳಗಾವಿ ನಗರ ಒಂದರಲ್ಲೇ ಒಟ್ಟು
34 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು
12,244 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲು ಪ್ರತಿ ಕೇಂದ್ರದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು,
250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪರೀಕ್ಷೆಯು ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಹಂತಗಳಲ್ಲಿ ನಡೆಯಲಿದೆ.
ನಿಯಮಗಳಲ್ಲಿ ಬದಲಾವಣೆ ಹಾಗೂ ವಿನಾಯಿತಿ:
ಪರೀಕ್ಷಾ ಅಕ್ರಮಗಳನ್ನು ತಡೆಯಲು ಬ್ಲೂಟೂತ್, ಮೊಬೈಲ್ ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಅಭ್ಯರ್ಥಿಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳನ್ನು ಗೌರವಿಸಿ
ಮಂಗಳಸೂತ್ರ ಹಾಗೂ ಜನಿವಾರ ಧರಿಸಲು ವಿನಾಯಿತಿ ನೀಡಲಾಗಿದೆ. ಇನ್ನು ಪಾರದರ್ಶಕತೆ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಖಾಸಗಿ ಕಾಲೇಜುಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ
ಡಬಲ್ ವೀಕ್ಷಕರನ್ನು (Double Observers) ನೇಮಕ ಮಾಡಲಾಗಿದೆ.
3 ಪ್ರತಿಗಳ OMR ಶೀಟ್ ಮತ್ತು 4 ಗಂಟೆಯಲ್ಲಿ ಸ್ಕ್ಯಾನಿಂಗ್:
ಪರೀಕ್ಷೆ ಪ್ರಾರಂಭವಾಗುವ ಕೇವಲ
ಒಂದು ಗಂಟೆ ಮುಂಚಿತವಾಗಿ ಭದ್ರತೆಯಲ್ಲಿ ಒಎಂಆರ್ (OMR) ಶೀಟ್‌ಗಳು ಪರೀಕ್ಷಾ ಕೇಂದ್ರಗಳನ್ನು ತಲುಪಲಿವೆ. ಈ ಬಾರಿ ಒಎಂಆರ್ ಶೀಟ್ ವಿಚಾರದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಅಭ್ಯರ್ಥಿಗಳು ಮೂರು ಪ್ರತಿಗಳನ್ನು (Triplicate) ಹೊಂದಿರುವ ಒಎಂಆರ್ ಶೀಟ್‌ನಲ್ಲಿ ಉತ್ತರಿಸಬೇಕಾಗುತ್ತದೆ. ಪರೀಕ್ಷೆ ಮುಗಿದ ಕೇವಲ
4 ಗಂಟೆಗಳ ಒಳಗಾಗಿ ಎಲ್ಲಾ ಒಎಂಆರ್ ಶೀಟ್‌ಗಳನ್ನು ಸ್ಕ್ಯಾನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್,
"ಯಾವುದೇ ರೀತಿಯ ತಿದ್ದುಪಡಿ ಅಥವಾ ಅಕ್ರಮದ ಆರೋಪಗಳು ಬಾರದಂತೆ ತಡೆಯಲು ಈ ಬಾರಿ ಮೂರು ಪ್ರತಿಗಳ ಒಎಂಆರ್ ಶೀಟ್ ನೀಡಲಾಗುತ್ತಿದೆ. ಇದರಲ್ಲಿ ಒಂದು ಪ್ರತಿಯು ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿ ಸುರಕ್ಷಿತವಾಗಿರಲಿದೆ, ಎರಡನೇ ಪ್ರತಿಯನ್ನು ಕೆಪಿಎಸ್ಸಿ ಪ್ರಧಾನ ಕಚೇರಿಗೆ ರವಾನಿಸಲಾಗುತ್ತದೆ ಹಾಗೂ ಮೂರನೇ ಪ್ರತಿಯನ್ನು ಸ್ಥಳದಲ್ಲೇ ಸ್ಕ್ಯಾನ್ ಮಾಡಲಾಗುತ್ತದೆ. ಇದರಿಂದ ಪರೀಕ್ಷಾ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯಲಿದೆ"
ಎಂದು ಸ್ಪಷ್ಟಪಡಿಸಿದರು.