ಕಬ್ಬು ಬೆಳೆಗಾರರ ವಿಚಾರದಲ್ಲಿ ಸಿಎಂ ತಪ್ಪು ನಿರ್ಧಾರ ಕೈಗೊಂಡಿದ್ದು, ಡಿ.2ರೊಳಗೆ ಪ್ರೋತ್ಸಾಹ ಧನ ಘೋಷಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.
ಬೆಳಗಾವಿ: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹಿತ ಕಾಯುವಲ್ಲಿ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳ ತಪ್ಪು ತೀರ್ಮಾನಗಳು ರೈತರನ್ನು ಸಂಕಷ್ಟಕ್ಕೆೆ ಸಿಲುಕಿಸಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ
ಕೋಡಿಹಳ್ಳಿ ಚಂದ್ರಶೇಖರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತ ಹೋರಾಟಗಾರರ ಬಾಯಲ್ಲಿ ಕಾರ್ಖಾನೆ ಮಾಲೀಕರ ಪರವಾದ ಬೇಡಿಕೆಗಳನ್ನು ತರಿಸಿಕೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಕಿಡಿಕಾರಿದ್ದಾರೆ.
ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸರ್ಕಾರದ ಧೋರಣೆಯನ್ನು ಖಂಡಿಸಿದ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರದ ನಿರ್ಧಾರಗಳ ಹಿಂದೆ ಲಾಬಿಯಿದೆ ಎಂದು ಗಂಭೀರ ಆರೋಪ ಮಾಡಿದರು. ಬೇರೆ ರಾಜ್ಯಗಳ ಮಾದರಿಯಂತೆ ರಾಜ್ಯದಲ್ಲೂ ಕಬ್ಬಿಗೆ ಪ್ರೋತ್ಸಾಹ ಧನ ಘೋಷಿಸುವಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಸರ್ಕಾರದ ಪ್ರಮುಖ ತಪ್ಪುಗಳು ಮತ್ತು ರೈತರ ವಿರೋಧ:
ಸಕ್ಕರೆ ದರವನ್ನು 60 ರೂ.ಗೆ ಏರಿಕೆ ಮಾಡಬೇಕು ಎಂದು ಹೇಳುವುದು ಮೊದಲ ತಪ್ಪು ಹಾಗೂ ಎಥೆನಾಲ್ ಖರೀದಿ ದರ ಜಾಸ್ತಿ ಮಾಡುವಂತೆ ಒತ್ತಾಯಿಸುವುದು ಎರಡನೇ ತಪ್ಪು. ಇನ್ನು
3600 ರೂ.ಗೆ ಕಬ್ಬಿನ ದರವನ್ನು ಒಪ್ಪಿಕೊಂಡಿರುವುದು ಮೂರನೇ ದೊಡ್ಡ ತಪ್ಪು ಎಂದು ಕೋಡಿಹಳ್ಳಿ ಚಂದ್ರಶೇಖರ್ ಪಟ್ಟಿ ಮಾಡಿದರು.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ಸರ್ಕಾರ ರೈತರಿಗೆ ಕೇವಲ
2500 ರೂ. ಪರಿಹಾರ ನೀಡುವ ಮೂಲಕ ಅನ್ನದಾತರಿಗೆ ಅಪಮಾನ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ
60 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ವರದಿ ನೀಡಿರುವ ರಾಜ್ಯ ಸರ್ಕಾರ, ರೈತರ ಖಾತೆಗಳಿಗೆ ಕೇವಲ ಅಲ್ಪಮೊತ್ತದ ಪರಿಹಾರ ಜಮಾ ಮಾಡುತ್ತಿರುವುದು ಖಂಡನೀಯ ಎಂದರು.
"ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ತಪ್ಪು ನಿರ್ಧಾರಗಳನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ರೈತರು ಈ ಸರ್ಕಾರವನ್ನೇ ವಜಾ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ." - ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯಾಧ್ಯಕ್ಷ, ರಾಜ್ಯ ರೈತ ಸಂಘ
ಡಿಸೆಂಬರ್ 2ರವರೆಗೆ ಗಡುವು - ಉಗ್ರ ಹೋರಾಟದ ಎಚ್ಚರಿಕೆ:
ಬೆಳಗಾವಿ ಅಧಿವೇಶನಕ್ಕೂ ಮುನ್ನ, ಅಂದರೆ ಡಿಸೆಂಬರ್ 2ರೊಳಗೆ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹ ಧನ ಘೋಷಿಸಬೇಕು. ತಪ್ಪಿದ್ದಲ್ಲಿ ರಾಜ್ಯಾದ್ಯಂತ ರೈತರನ್ನು ಒಗ್ಗೂಡಿಸಿ
ಡಿಸೆಂಬರ್ 2 ರಿಂದ ಅನಿರ್ದಿಷ್ಟಾವಧಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.