ಬೆಳಗಾವಿ ಸರ್ಕಿಟ್ ಹೌಸ್‌ನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಎರಡನೇ ಸುತ್ತಿನ ಮಹತ್ವದ ಸಭೆ ನಡೆಯಿತು.
ಬೆಳಗಾವಿ: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳು ಮತ್ತು ಬಾಕಿ ಬಿಲ್ ಪಾವತಿ ಕುರಿತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್ ಅವರು ಸೋಮವಾರ ರಾತ್ರಿ ನಗರದ ಸರ್ಕಿಟ್ ಹೌಸ್‌ನಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ
ಎರಡನೇ ಸುತ್ತಿನ ಮಹತ್ವದ ಸಭೆ ನಡೆಸಿ ಚರ್ಚಿಸಿದರು.
ರೈತರಿಂದ ಕಬ್ಬು ಖರೀದಿಸಿದರೂ ಸಕಾಲದಲ್ಲಿ ಹಣ ಪಾವತಿಸದ ಕಾರ್ಖಾನೆಗಳ ಧೋರಣೆ ಹಾಗೂ ಬೆಂಬಲ ಬೆಲೆ ನಿಗದಿಯ ವಿಚಾರವಾಗಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ರೈತ ಮುಖಂಡರ ಹೋತಾಟ ತೀವ್ರಗೊಳ್ಳುವ ಮುನ್ನವೇ ವಿವಾದಕ್ಕೆ ತೆರೆ ಎಳೆಯಲು ಸರ್ಕಾರ ಮುಂದಾಗಿದೆ.
ಸಭೆಯಲ್ಲಿ ಪ್ರಮುಖರ ಉಪಸ್ಥಿತಿ:
ಈ ಉನ್ನತ ಮಟ್ಟದ ಸಭೆಯಲ್ಲಿ ಸಚಿವರಾದ
ಸತೀಶ್ ಜಾರಕಿಹೊಳಿ,
ಲಕ್ಷ್ಮಣ್ ಸವದಿ,
ಸಂತೋಷ್ ಲಾಡ್,
ಯಶವಂತರಾಯ ಗೌಡ ಪಾಟೀಲ್, ಶಾಸಕ
ಎನ್.ಎಚ್. ಕೋನರೆಡ್ಡಿ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ
ಎಲ್. ಅತೀಕ್ ಭಾಗವಹಿಸಿದ್ದರು.
ಜೊತೆಗೆ, ಅಪರ ಮುಖ್ಯ ಕಾರ್ಯದರ್ಶಿಗಳಾದ
ತುಷಾರ್ ಗಿರಿನಾಥ್, ಬೆಳಗಾವಿ ಜಿಲ್ಲಾಧಿಕಾರಿ
ಮೊಹಮ್ಮದ್ ರೋಶನ್ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದು, ರೈತರ ಬೇಡಿಕೆಗಳು ಹಾಗೂ ಕಾರ್ಖಾನೆಗಳ ಅಡಚಣೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಆದ್ಯತೆಯಾಗಿದ್ದು, ರೈತರಿಗೆ ಸಿಗಬೇಕಾದ ಬಾಕಿ ಹಣವನ್ನು ತಕ್ಷಣವೇ ಪಾವತಿಸುವಂತೆ ಕಾರ್ಖಾನೆಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.