ಬೆಳಗಾವಿಯ ಆರ್‌ಪಿಡಿ ಕ್ರಾಸ್‌ನಲ್ಲಿರುವ ಸ್ಪಾ ಮೇಲೆ ಸಿಸಿಬಿ ದಾಳಿ ನಡೆಸಿ, ವೇಶ್ಯಾವಾಟಿಕೆ ದಂಧೆಯಿಂದ ಅಂತರರಾಜ್ಯದ ೪ ಯುವತಿಯರನ್ನು ರಕ್ಷಿಸಿದ್ದಾರೆ.
ಬೆಳಗಾವಿ: ನಗರದ ಪ್ರತಿಷ್ಠಿತ ಆರ್‌ಪಿಡಿ ಕ್ರಾಸ್ ಸಮೀಪದ ಸಲೂನ್ ಮತ್ತು ಸ್ಪಾ ವೊಂದರ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ, ವೇಶ್ಯಾವಾಟಿಕೆ ಅಡ್ಡೆಯನ್ನು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಗುಜರಾತ್ ಹಾಗೂ ಮುಂಬೈ ಮೂಲದ
೪ ಅಂತರರಾಜ್ಯ ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು, ಸ್ಪಾ ಮಾಲೀಕ ಹಾಗೂ ಮ್ಯಾನೇಜರ್ ಅನ್ನು ವಶಕ್ಕೆ ಪಡೆಯಲಾಗಿದೆ.

ನಗರದಲ್ಲಿ ಸ್ಪಾ ಮತ್ತು ಸಲೂನ್ ಮರೆತು ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂಬ ಖಚಿತ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್
ಮಂಜುನಾಥ ನಾಯಕ ನೇತೃತ್ವದಲ್ಲಿ ಪೊಲೀಸರ ತಂಡವು ಆರ್‌ಪಿಡಿ ಕ್ರಾಸ್‌ನಲ್ಲಿದ್ದ 'ಡಿವೈನ್ ಸಲೂನ್ ಆ್ಯಂಡ್ ಸ್ಪಾ' ಮೇಲೆ ದಾಳಿ ನಡೆಸಿತು.
ಅಂತರರಾಜ್ಯ ಜಾಲ ಪತ್ತೆ:
ಹೊರ ರಾಜ್ಯಗಳಿಂದ ಯುವತಿಯರನ್ನು ಕರೆಸಿ, ಅವರಿಗೆ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಳ್ಳಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ದಾಳಿ ವೇಳೆ ಗುಜರಾತ್ ಮತ್ತು ಮುಂಬೈ ಮೂಲದ ಒಟ್ಟು
೪ ಯುವತಿಯರನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
"ಸಲೂನ್ ಮತ್ತು ಸ್ಪಾ ಮುಖವಾಡದಡಿಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ವಶಕ್ಕೆ ಪಡೆದ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಟಿಳಕವಾಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ." - ಹಿರಿಯ ಪೊಲೀಸ್ ಅಧಿಕಾರಿಗಳು.
ಮುಂದಿನ ತನಿಖೆ:
ವಶಕ್ಕೆ ಪಡೆದ ಸ್ಪಾ ಮಾಲೀಕ ಮತ್ತು ಮ್ಯಾನೇಜರ್ ಅನ್ನು ಸ್ಥಳೀಯ
ಟಿಳಕವಾಡಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಈ ದಂಧೆಯ ಹಿಂದೆ ಬೇರೆ ಯಾರೆಲ್ಲ ಇದ್ದಾರೆ ಮತ್ತು ಇದರ ಜಾಲ ಎಷ್ಟು ವಿಸ್ತಾರವಾಗಿದೆ ಎಂಬ ಕುರಿತು ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.