ಬೆಳಗಾವಿಯ ₹2,459 ಕೋಟಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಿವಾನಂದ ನೀಲನವರಗೆ ಸೇರಿದ ₹427.16 ಕೋಟಿ ಮೌಲ್ಯದ ಆಸ್ತಿಯನ್ನು ಇ.ಡಿ. ಜಪ್ತಿ ಮಾಡಿದೆ.
ಬೆಳಗಾವಿ: ಹೆಚ್ಚಿನ ಬಡ್ಡಿ ಹಾಗೂ ಭಾರೀ ಲಾಭದ ಆಮಿಷವೊಡ್ಡಿ ಸಾವಿರಾರು ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಬಹುಕೋಟಿ ಹೂಡಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (
ED) ಮಹತ್ವದ ಕಾರ್ಯಾಚರಣೆ ನಡೆಸಿದೆ. ಪ್ರಕರಣದ ಪ್ರಮುಖ ಆರೋಪಿ
ಶಿವಾನಂದ ಸಿದ್ದಪ್ಪ ನೀಲನವರ ಹಾಗೂ ಅವರ ಸಹಚರರಿಗೆ ಸೇರಿದ ಒಟ್ಟು
₹427.16 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿ ಆದೇಶ ಹೊರಡಿಸಿದೆ.
ಮಂಗಳೂರಿನ ಇ.ಡಿ. ಉಪವಲಯ ಕಚೇರಿಯು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (
PMLA) 2002ರ ಅಡಿಯಲ್ಲಿ ಈ ಕಠಿಣ ಕ್ರಮ ಕೈಗೊಂಡಿದ್ದು, ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಈ ಬೃಹತ್ ಜಾಲವು ಸುಮಾರು
35 ಸಾವಿರಕ್ಕೂ ಅಧಿಕ ಹೂಡಿಕೆದಾರರಿಂದ ಒಟ್ಟಾರೆ
₹2,459.49 ಕೋಟಿ ಹಣ ಸಂಗ್ರಹಿಸಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.
ಜಪ್ತಿ ಮಾಡಲಾದ ಆಸ್ತಿಗಳ ವಿವರ:
ತನಿಖಾ ಸಂಸ್ಥೆಯು ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಜಪ್ತಿ ಮಾಡಲಾದ ಒಟ್ಟು
₹427,16,37,165 ಮೌಲ್ಯದ ಆಸ್ತಿಗಳಲ್ಲಿ ವಿವಿಧ ರೂಪದ ಹೂಡಿಕೆಗಳು ಸೇರಿವೆ. ಅವುಗಳ ವಿವರ ಈ ಕೆಳಗಿನಂತಿದೆ:
- ಸ್ಥಿರ ಠೇವಣಿಗಳು (FDs): ₹367.77 ಕೋಟಿ
- ಬ್ಯಾಂಕ್ ಖಾತೆಗಳಲ್ಲಿನ ನಗದು: ₹44.37 ಕೋಟಿ
- ಸ್ಥಿರಾಸ್ತಿಗಳು (ಕೃಷಿ ಜಮೀನು, ಬಂಗಲೆ, ಅಪಾರ್ಟ್‌ಮೆಂಟ್): ₹13.68 ಕೋಟಿ
- ಷೇರು ಮಾರುಕಟ್ಟೆ ಹೂಡಿಕೆಗಳು: ₹1.31 ಕೋಟಿ
ಒಟ್ಟು
47 ವೈಯಕ್ತಿಕ ಹಾಗೂ ಕಾರ್ಪೊರೇಟ್ ಬ್ಯಾಂಕ್ ಖಾತೆಗಳು ಮತ್ತು
42 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ ಮತ್ತು ಅಕ್ರಮ ವರ್ಗಾವಣೆ:
ಹೂಡಿಕೆದಾರರನ್ನು ಸೆಳೆಯಲು ಆರೋಪಿಗಳು ಪ್ರತಿ ತಿಂಗಳು
ಶೇ.3ರಷ್ಟು ಖಚಿತ ಆದಾಯ ಹಾಗೂ ಹೊಸ ಗ್ರಾಹಕರನ್ನು ಪರಿಚಯಿಸಿದರೆ
ಶೇ.0.5ರಷ್ಟು ಕಮಿಷನ್ ನೀಡುವುದಾಗಿ ನಂಬಿಸಿದ್ದರು. ನೆಟ್‌ವರ್ಕ್ ವಿಸ್ತರಿಸಲು 'ಲೀಡರ್ಸ್' ಎಂಬ ಏಜೆಂಟರನ್ನು ನಿಯೋಜಿಸಲಾಗಿತ್ತು. ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಯದ್ವಾತದ್ವಾ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಸುಮಾರು
₹185.95 ಕೋಟಿ ಹಣವನ್ನು ಅಪಾಯಕಾರಿ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ತೊಡಗಿಸಿ ಭಾರಿ ನಷ್ಟ ಅನುಭವಿಸಲಾಗಿದೆ ಎಂದು ಇ.ಡಿ. ತಿಳಿಸಿದೆ.
ಅಲ್ಲದೆ, ಶ್ರೀಮಾತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಮತ್ತು ಧನಶ್ರೀ ಮಲ್ಟಿಪರ್ಪಸ್ ಸೊಸೈಟಿ ಸೇರಿದಂತೆ ವಿವಿಧ ಸಹಕಾರಿ ಸಂಸ್ಥೆಗಳ ಮೂಲಕ ಹಣವನ್ನು ತಿರುಗಿಸಿ, ಕುಟುಂಬ ಸದಸ್ಯರ ಖಾತೆಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಬಳಸಲಾಗಿದೆ. ಆರೋಪಿಯ ಪತ್ನಿ ಸಂಗೀತಾ ಮತ್ತು ಅಪ್ರಾಪ್ತ ಪುತ್ರ ಸಿದ್ಧಾಂತ್ ಹೆಸರಿಗೂ ಹಣ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಪೊಲೀಸ್ ಎಫ್‌ಐಆರ್‌ನಿಂದ ಆರಂಭವಾದ ತನಿಖೆ:
"ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್, ಬಿಎನ್‌ಎಸ್ ಕಾಯ್ದೆ ಹಾಗೂ ಬಿಎಸ್‌ಡಿಎಸ್ (BUDS) ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ಆಧರಿಸಿ ಇ.ಡಿ. ತನಿಖೆ ತೀವ್ರಗೊಳಿಸಿದೆ. ಈಗಾಗಲೇ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ವಿಶೇಷ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಲಾಗಿದೆ."
ಕಳೆದ ಆಗಸ್ಟ್‌ನಲ್ಲಿ ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿ ಸೇರಿದಂತೆ ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸಿ ಮಹತ್ವದ ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆಘಾತಕಾರಿ ಸಂಗತಿಗಳು ಹೊರಬರುವ ಸಾಧ್ಯತೆಯಿದೆ.