ಬೆಳಗಾವಿಯ ಆನಂದ ನಗರದಲ್ಲಿ 33 ವರ್ಷದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆಕೆಯ ಗೆಳೆಯನೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
BELAGAVI: ಬೆಳಗಾವಿಯ ಆನಂದ ನಗರದಲ್ಲಿ ಗಂಡ ಕುವೈತ್ನಲ್ಲಿದ್ದ ಸಮಯದಲ್ಲಿ
33 ವರ್ಷದ ಗೃಹಿಣಿ ಪುನಂ ಅಮಿತ್ ಡೇಳೇಕರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಆಕೆಯ ಗೆಳೆಯ ಯತ್ನಿಸಿದ್ದಾನೆ ಎಂದು ಮೃತರ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.
ಮಧ್ಯರಾತ್ರಿ ಫೋನ್ ಕಾಲ್ ಹಾಗೂ ಅನುಮಾನಾಸ್ಪದ ಸನ್ನಿವೇಶ:
ಮಧ್ಯರಾತ್ರಿ ಸುಮಾರು
2 ಗಂಟೆಯ ವೇಳೆಗೆ ರಂಜನ್ ಮರ್ವೆ ಎಂಬ ಯುವಕ, ಪುನಂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದ. ಆದರೆ ಸಂಬಂಧಿಕರು ಸ್ಥಳಕ್ಕೆ ಧಾವಿಸಿದಾಗ ಪುನಂ ಶವ ಮಂಚದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಮನೆಯ ಅಡುಗೆ ಕೋಣೆಯಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಪಾರ್ಟಿ ಮಾಡಿದ ನಂತರ ರಂಜನ್ ಆಕೆಯನ್ನು ಕೊಲೆ ಮಾಡಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಸ್ವಂತ ಮನೆ ತೊರೆದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ್ ಪುನಂ:
ಖಾಸಗಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪುನಂಗೆ ಕಳೆದ ಕೆಲವು ವರ್ಷಗಳಿಂದ ರಂಜನ್ ಪರಿಚಯವಿದ್ದ. ಈ ಪರಿಚಯದ ಹಿನ್ನೆಲೆಯಲ್ಲಿ ಆಕೆ ಸ್ವಂತ ಮನೆಯನ್ನು ತೊರೆದು ಆನಂದ ನಗರದಲ್ಲಿ ಪ್ರತ್ಯೇಕವಾಗಿ ಬಾಡಿಗೆ ಮನೆ ಮಾಡಿಕೊಂಡಿದ್ದಳು ಎನ್ನಲಾಗಿದೆ. ಕುವೈತ್ನಲ್ಲಿ ಉದ್ಯೋಗದಲ್ಲಿರುವ ಪತಿಯ ಗೈರುಹಾಜರಿಯನ್ನೇ ಬಂಡವಾಳ ಮಾಡಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ.
ಪೋಲಿಸರ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಅಸಮಾಧಾನ:
ಸದ್ಯ ಮೃತದೇಹವನ್ನು ನಗರದ
ಬಿಮ್ಸ್ (BIMS) ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆ ನಡೆದು ಗಂಟೆಗಳು ಕಳೆದರೂ ಶಹಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕರಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮೃತರ ಕುಟುಂಬಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಮಧ್ಯರಾತ್ರಿ ನೇಣು ಹಾಕಿಕೊಂಡಿದ್ದಾಳೆ ಎಂದು ಹೇಳಿ ನಮಗೆ ಕರೆ ಮಾಡಲಾಗಿತ್ತು. ಆದರೆ ನಾವು ಬಂದಾಗ ಮೃತದೇಹ ಹಾಸಿಗೆಯ ಮೇಲಿತ್ತು. ಮನೆಯಲ್ಲಿ ಮದ್ಯದ ಬಾಟಲಿಗಳಿದ್ದವು. ಇದು ಖಂಡಿತವಾಗಿಯೂ ಕೊಲೆ, ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು." - ಮೃತರ ಸಂಬಂಧಿಕರು