ಬೆಳಗಾವಿಯಲ್ಲಿ ಗೃಹ ಲಕ್ಷ್ಮೀ ಯೋಜನೆಯ ಹಣ ಹಾಗೂ ಚಿನ್ನಕ್ಕಾಗಿ 78 ವರ್ಷದ ಅಜ್ಜಿಯನ್ನು ಕೊಲೆ ಮಾಡಿ ಡ್ಯಾಂ ಹಿನ್ನೀರಿನಲ್ಲಿ ಶವ ಎಸೆದಿದ್ದ ಮೊಮ್ಮಗ ಮತ್ತು ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ: ಗೃಹ ಲಕ್ಷ್ಮೀ ಯೋಜನೆಯ ಹಣ ಮತ್ತು ಚಿನ್ನದಾಸೆಗಾಗಿ ಹೆತ್ತ ಅಜ್ಜಿಯನ್ನೇ ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಗೋಣಿಚೀಲದಲ್ಲಿ ಕಟ್ಟಿ ನದಿಗೆ ಎಸೆದಿದ್ದ ಪಾಪಿ ಮೊಮ್ಮಗ ಹಾಗೂ ಆತನಿಗೆ ಸಾಕ್ಷ್ಯ ನಾಶಪಡಿಸಲು ಸಹಾಯ ಮಾಡಿದ್ದ ತಂದೆಯನ್ನು
ಯಮಕನಮರಡಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕೆ. ರಾಮರಾಜನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.

ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ
ಹಮ್ಮನ್ನಾ ಬಾಲಪ್ರಾ ಸನದಿ (78) ಕೊಲೆಯಾದ ದುರ್ದೈವಿ ವೃದ್ಧೆ. ಕಳೆದ ನವೆಂಬರ್ 10ರಂದು ಪಾಶ್ಚಾಪುರ ಸಂತೆಗೆ ಹೋಗುವುದಾಗಿ ಮನೆಯಿಂದ ತೆರಳಿದ್ದ ವೃದ್ಧೆ ನಾಪತ್ತೆಯಾಗಿದ್ದರು. ಬಳಿಕ ನವೆಂಬರ್ 15ರ ಸಂಜೆ ಜಿನರಾಳ ಗ್ರಾಮದ ಬಳಿಯ ಘಟಪ್ರಭಾ ನದಿ ಡ್ಯಾಂ ಹಿನ್ನೀರಿನಲ್ಲಿ ಗೋಣಿ ಚೀಲಗಳಲ್ಲಿ ಕಲ್ಲುಗಳೊಂದಿಗೆ ಕಟ್ಟಿಹಾಕಿದ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿತ್ತು.
ಕೊಲೆಯ ರಹಸ್ಯ ಬಯಲು:
ಮೃತಳ ಮಗಳು ನೀಡಿದ ದೂರಿನ ಮೇರೆಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಲಾಗಿತ್ತು. ತನಿಖೆ ವೇಳೆ ಮೃತ ವೃದ್ಧೆಯ ಸ್ವಂತ ಮೊಮ್ಮಗ
ಭೀಮಪ್ಪ ರಾಮಪ್ಪ ಸನದಿ (20) ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ವೃದ್ಧೆಗೆ ಸರ್ಕಾರದಿಂದ ಬರುತ್ತಿದ್ದ ಗೃಹಲಕ್ಷ್ಮೀ ಯೋಜನೆಯ ಹಣದಲ್ಲಿ ತನಗೂ ಪಾಲು ನೀಡುವಂತೆ ಆರೋಪಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಜಗಳವಾಡುತ್ತಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ನವೆಂಬರ್ 10ರಂದು ಅಜ್ಜಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಗವಿಸಿದ್ದೇಶ್ವರ ಗುಡ್ಡಕ್ಕೆ ತೆರಳಿದ್ದ ಆರೋಪಿ, ಹಣದ ವಿಚಾರವಾಗಿ ಜಗಳವಾಡಿದ್ದಾನೆ. ಅಜ್ಜಿ ಹಣ ನೀಡಲು ನಿರಾಕರಿಸಿದಾಗ ಆಕೆಯನ್ನು ಕೆಳಗೆ ತಳ್ಳಿ, ಕುತ್ತಿಗೆ ಹಿಸುಕಿ ಹಾಗೂ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಮೃತಳ ಬಳಿಯಿದ್ದ 2,300 ರೂ. ನಗದು ಮತ್ತು ಎರಡು ಬಂಗಾರದ ಸರಗಳನ್ನು ದೋಚಿದ್ದಾನೆ.
ಸಾಕ್ಷ್ಯ ನಾಶಕ್ಕೆ ಯತ್ನ:
ಕೊಲೆ ಮಾಡಿದ ಬಳಿಕ ಶವವನ್ನು ಮುಚ್ಚಿಹಾಕಲು ಆರೋಪಿ ಪಾಶ್ಚಾಪುರದಿಂದ ಎರಡು ಗೋಣಿ ಚೀಲಗಳನ್ನು ತಂದಿದ್ದನು. ರಾತ್ರಿ ವೇಳೆ ಬೈಕ್‌ನಲ್ಲಿ ಶವವನ್ನು ಸಾಗಿಸಿ ಜಿನರಾಳ ಗ್ರಾಮದ ಡ್ಯಾಂ ಹಿನ್ನೀರಿಗೆ ತಂದು, ಶವ ತೇಲಬಾರದೆಂದು ಗೋಣಿಚೀಲಕ್ಕೆ ದೊಡ್ಡ ಕಲ್ಲುಗಳನ್ನು ಕಟ್ಟಿ ನೀರಿನಲ್ಲಿ ಎಸೆದಿದ್ದನು. ಈ ಕೃತ್ಯಕ್ಕೆ ಸಾಕ್ಷ್ಯ ಮರೆಮಾಚಲು ಹಾಗೂ ಆರೋಪಿಯನ್ನು ರಕ್ಷಿಸಲು ಸಹಕರಿಸಿದ ಆರೋಪಿಯ ತಂದೆಯನ್ನೂ ಸಹ ಪೊಲೀಸರು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.