ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ ಜಾರಿ: ಕಬ್ಬು ಬೆಳೆಗಾರರಿಗೆ ಉತ್ತಮ ದರದ ನಿರೀಕ್ಷೆ
ಬೆಳಗಾವಿ ಜಿಲ್ಲಾಡಳಿತವು ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರವನ್ನು ಜಾರಿಗೆ ತಂದಿದೆ. ಸಕ್ಕರೆ ದರ ₹45ಕ್ಕಿಂತ ಹೆಚ್ಚಾದರೆ ನಿಗದಿತ ಕೋಷ್ಟಕದಂತೆ ರೈತರಿಗೆ ಹೆಚ್ಚುವರಿ ಮೊತ್ತ ಪಾವತಿಸಲಾಗುತ್ತದೆ.
ಈ ಲೇಖನವನ್ನು ಆಲಿಸಿ TTS AI
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಈ ಹೊಸ ಸೂತ್ರಕ್ಕೆ ರೂಪ ನೀಡಲಾಗಿದೆ. ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಪ್ರಭಾರ ಜಿಲ್ಲಾಧಿಕಾರಿ ರಾಹುಲ್ ಶಿಂಧೆ ಸೇರಿದಂತೆ ಹಿರಿಯ ಅಧಿಕಾರಿಗಳು, ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಆಡಳಿತ ಮಂಡಳಿಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ರೈತರ ಬೇಡಿಕೆಗಳಿಗೆ ಅನುಗುಣವಾಗಿ ರೂಪಿಸಿರುವ ಈ ಸೂತ್ರಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಸಹಮತ ಸೂಚಿಸಿದ್ದಾರೆ. ಈ ವ್ಯವಸ್ಥೆಯಡಿ ಕಾರ್ಖಾನೆಗಳ ಒಟ್ಟು ಆದಾಯಕ್ಕಿಂತ ಸಕ್ಕರೆ ಮಾರಾಟದಿಂದ ಲಭಿಸುವ ಸರಾಸರಿ ಬೆಲೆ ಹಾಗೂ ಲಾಭವನ್ನು ಆಧಾರವಾಗಿಟ್ಟುಕೊಂಡು ರೈತರಿಗೆ ಅಂತಿಮ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ.
ಈ ಹಿಂದೆ ಕಾರ್ಖಾನೆಗಳ ಒಟ್ಟು ಆದಾಯದ ಆಧಾರದ ಮೇಲೆ ಲಾಭ ಹಂಚಿಕೆ ಮಾಡಲಾಗುತ್ತಿತ್ತು. ಇದೀಗ ಸಕ್ಕರೆ ಮಾರಾಟದ ಸರಾಸರಿ ದರವನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ಲಾಭದ ಪಾಲು ದೊರೆಯುವಂತೆ ಹೊಸ ಸೂತ್ರ ರೂಪಿಸಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಕಬ್ಬು ಪೂರೈಸುವ ರೈತರಿಗೆ ಹೆಚ್ಚಿನ ದರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಕಬ್ಬಿನ ದರ ಹೆಚ್ಚಿಸುವಂತೆ ರಾಜ್ಯಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ. ಸರ್ಕಾರದ ಪ್ರೋತ್ಸಾಹಧನ ಹೆಚ್ಚಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಗಳಲ್ಲೊಂದಾಗಿದೆ.
ಈ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಜಿಲ್ಲಾಡಳಿತವು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ, ರೈತರ ಹಿತರಕ್ಷಣೆಗೆ ಲಾಭ ಹಂಚಿಕೆ ಸೂತ್ರ ರೂಪಿಸಿದೆ.
ಕಬ್ಬಿನ ಪಾವತಿ ಹೇಗೆ?
1. ಮೊದಲ ಕಬ್ಬಿನ ಮುಂಗಡ:
ಪ್ರತಿ ಮೆಟ್ರಿಕ್ ಟನ್‌ಗೆ ₹3,500
2. ಎರಡನೇ ಕಬ್ಬಿನ ಮುಂಗಡ:
ಹಂಗಾಮು ಮುಕ್ತಾಯಗೊಂಡ ಬಳಿಕ ಪ್ರತಿ ಮೆಟ್ರಿಕ್ ಟನ್‌ಗೆ ₹100
3. ಅಂತಿಮ ಕಬ್ಬಿನ ಬಿಲ್:
ಹೊಸ ಹಂಗಾಮು ಆರಂಭವಾಗುವ ಮೊದಲು ಸಕ್ಕರೆಯ ಸರಾಸರಿ ಮಾರಾಟದ ದರವು ಪ್ರತಿ ಕೆ.ಜಿ.ಗೆ ₹45ಕ್ಕಿಂತ ಹೆಚ್ಚಿದ್ದರೆ, ನಿಗದಿಪಡಿಸಿರುವ ಕೋಷ್ಟಕದ ಪ್ರಕಾರ ಹೆಚ್ಚುವರಿ ಮೊತ್ತವನ್ನು ಅಂತಿಮ ಕಬ್ಬಿನ ಬಿಲ್‌ನಲ್ಲಿ ಪಾವತಿಸಲಾಗುತ್ತದೆ.
ಸಕ್ಕರೆ ದರ ಹೆಚ್ಚಿದಂತೆ ರೈತರಿಗೆ ಹೆಚ್ಚುವರಿ ಲಾಭ
ಲಭ್ಯವಿರುವ ಕೋಷ್ಟಕದ ಪ್ರಕಾರ, ಸಕ್ಕರೆಯ ದರ ₹46.50 ಇದ್ದಾಗ ಹೆಚ್ಚುವರಿ ಪಾವತಿ ಇರುವುದಿಲ್ಲ. ₹48ರಿಂದ ಸಕ್ಕರೆ ದರ ಹೆಚ್ಚಾದಂತೆ ರೈತರಿಗೆ ಹೆಚ್ಚುವರಿ ಮೊತ್ತ ಲಭಿಸುತ್ತದೆ. ₹50ರ ಸಕ್ಕರೆ ದರದಲ್ಲಿ ಪ್ರತಿ ಟನ್‌ಗೆ ₹250, ₹50.50ರ ದರದಲ್ಲಿ ₹300, ₹55ರ ದರದಲ್ಲಿ ₹750 ಹೆಚ್ಚುವರಿ ಮೊತ್ತ ಪಾವತಿಯಾಗಲಿದೆ.
ಹೀಗಾಗಿ ಸಕ್ಕರೆ ಮಾರಾಟದ ಬೆಲೆ ಹೆಚ್ಚಾದಷ್ಟೂ ಅದರ ಲಾಭದ ಒಂದು ಭಾಗ ನೇರವಾಗಿ ಕಬ್ಬು ಬೆಳೆಗಾರರಿಗೆ ತಲುಪುವ ರೀತಿಯಲ್ಲಿ ಈ ಹೊಸ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.
B News Desk
Senior Staff Journalist and Correspondent at B News. Covering breaking global stories, contemporary culture, and modern innovations.