ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಹಾಸಭೆಯ (UNGA) ಪ್ರಮುಖ ಸಮಿತಿಯೊಂದರಲ್ಲಿ ಮಹತ್ವದ ರಾಜತಾಂತ್ರಿಕ ಹೆಜ್ಜೆ ಇರಿಸಿರುವ ಭಾರತ, ಪ್ಯಾಲೆಸ್ಟೀನ್ ಪರವಾಗಿ ಮತ ಚಲಾಯಿಸಿದೆ. ಆಕ್ರಮಿತ ಪ್ಯಾಲೆಸ್ಟೀನ್ ಪ್ರದೇಶಗಳು ಮತ್ತು ಸಿರಿಯಾದ ಗೋಲಾನ್ ಸಮತಟ್ಟು ಪ್ರದೇಶಗಳಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಸ್ಥಳೀಯ ಅರಬ್ ಜನತೆಯ ಸಾರ್ವಭೌಮ ಹಕ್ಕುಗಳನ್ನು ದೃಢಪಡಿಸುವ ನಿರ್ಣಯವನ್ನು ಭಾರತ ಬೆಂಬಲಿಸಿದೆ. ಯುಎನ್ ಜಿಎಯ ದೈವಿಕ ಸಮಿತಿಯಲ್ಲಿ ನಡೆದ ಈ ಮತದಾನದಲ್ಲಿ ಇಸ್ರೇಲ್ ವಿರುದ್ಧದ ನಿರ್ಣಯಕ್ಕೆ 151 ದೇಶಗಳ ಭಾರಿ ಬೆಂಬಲ ವ್ಯಕ್ತವಾಗಿದೆ. ಆದರೆ ಅಮೆರಿಕ ಮತ್ತು ಇಸ್ರೇಲ್ ಸೇರಿದಂತೆ ಕೇವಲ 7 ದೇಶಗಳು ಮಾತ್ರ ಇದರ ವಿರುದ್ಧ ಮತ ಚಲಾಯಿಸಿವೆ.
ಬುಧವಾರ ನಡೆದ ಈ ಮತದಾನ ಪ್ರಕ್ರಿಯೆಯಲ್ಲಿ 11 ದೇಶಗಳು ತಟಸ್ಥವಾಗಿ ಉಳಿದುಕೊಂಡಿದ್ದವು. ಭಾರತದೊಂದಿಗೆ ರಷ್ಯಾ, ಚೀನಾ, ಬ್ರೆಜಿಲ್ ಹಾಗೂ ವಿಶ್ವದ ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಈ ನಿರ್ಣಯದ ಪರವಾಗಿ ನಿಂತಿವೆ. ಉರುಗ್ವೆ ಮಂಡಿಸಿದ 'ಗ್ರೂಪ್ ಆಫ್ 77' ಮತ್ತು ಚೀನಾದ ಪ್ರಸ್ತಾವನೆಯು 'ಆಕ್ರಮಿತ ಪ್ಯಾಲೆಸ್ಟೀನ್ ಪ್ರದೇಶ (ಪೂರ್ವ ಜೆರುಸಲೇಮ್ ಸೇರಿದಂತೆ) ಹಾಗೂ ಆಕ್ರಮಿತ ಸಿರಿಯನ್ ಗೋಲಾನ್ನಲ್ಲಿರುವ ಅರಬ್ ಜನತೆಯ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಶಾಶ್ವತ ಸಾರ್ವಭೌಮತ್ವ' ಎಂಬ ಶೀರ್ಷಿಕೆಯನ್ನು ಹೊಂದಿದೆ.
ನೈಸರ್ಗಿಕ ಸಂಪನ್ಮೂಲಗಳ ಶೋಷಣೆಗೆ ತಡೆ ಕೋರಿಕೆ:
ಪೂರ್ವ ಜೆರುಸಲೇಮ್ ಸೇರಿದಂತೆ ವೆಸ್ಟ್ ಬ್ಯಾಂಕ್ ಮತ್ತು ಗೋಲಾನ್ ಹೈಟ್ಸ್ನಲ್ಲಿ ವಾಸಿಸುವ ಸ್ಥಳೀಯ ಜನತೆಗೆ ತಮ್ಮ ಭೂಮಿ, ನೀರು ಹಾಗೂ ಇಂಧನ ಸಂಪನ್ಮೂಲಗಳ ಮೇಲೆ ಸಂಪೂರ್ಣ ಹಕ್ಕಿದೆ ಎಂದು ನಿರ್ಣಯದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಪ್ರದೇಶಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಶೋಷಣೆ, ಹಾನಿ ಹಾಗೂ ಅವುಗಳಿಗೆ ಧಕ್ಕೆ ತರುವ ಎಲ್ಲ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಅಂತರರಾಷ್ಟ್ರೀಯ ಸಮುದಾಯವು ಇಸ್ರೇಲ್ ಅನ್ನು ಒತ್ತಾಯಿಸಿದೆ.
ಜತೆಗೆ, ಇಸ್ರೇಲ್ನ ಅಕ್ರಮ ವಸಾಹತುಗಳ ನಿರ್ಮಾಣ ಹಾಗೂ ವಿಸ್ತರಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನಿರ್ಣಯ, ಈ ಕೃತ್ಯಗಳು ಪ್ಯಾಲೆಸ್ಟೀನ್ ನಾಗರಿಕರನ್ನು ಅವರ ಮೂಲಭೂತ ನೈಸರ್ಗಿಕ ಹಕ್ಕುಗಳಿಂದ ವಂಚಿತರನ್ನಾಗಿ ಮಾಡುತ್ತಿವೆ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಉಲ್ಲಂಘಿಸುತ್ತಿವೆ ಎಂದು ತಿಳಿಸಿದೆ.
ಭಾರತದ ವಿದೇಶಾಂಗ ನೀತಿಯ ಮಹತ್ವ:
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಭಾರತ ತನ್ನ ದೃಢ ಹಾಗೂ ಸ್ಥಿರ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇಸ್ರೇಲ್-ಪ್ಯಾಲೆಸ್ಟೀನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರವಾಗಿ 'ದ್ವಿ-ರಾಷ್ಟ್ರ ಸಿದ್ಧಾಂತ' (ಟು-ಸ್ಟೇಟ್ ಸೊಲ್ಯೂಷನ್) ಅನ್ನು ಭಾರತ ಸದಾ ಬೆಂಬಲಿಸುತ್ತ ಬಂದಿದ್ದು, ಇಸ್ರೇಲ್ನೊಂದಿಗೆ ಸ್ವತಂತ್ರ, ಸಾರ್ವಭೌಮ ಪ್ಯಾಲೆಸ್ಟೀನ್ ರಾಷ್ಟ್ರದ ಅಸ್ತಿತ್ವಕ್ಕೆ ಧ್ವನಿಗೂಡಿಸಿದೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಹಣಕಾಸು ಸಮಿತಿ ನಿರ್ಣಯಗಳು ನೇರವಾಗಿ ಕಾನೂನುಬದ್ಧವಾಗಿರದೇ ಇದ್ದರೂ, ಜಾಗತಿಕ ವೇದಿಕೆಯಲ್ಲಿ ಇಸ್ರೇಲ್ ಮೇಲಿನ ರಾಜತಾಂತ್ರಿಕ ಹಾಗೂ ನೈತಿಕ ಒತ್ತಡವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತದ ಈ ನಿರ್ಧಾರ ಅತ್ಯಂತ ಮಹತ್ವಪೂರ್ಣವೆಂದು ವಿಶ್ಲೇಷಿಸಲಾಗಿದೆ.