ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಇಂದು ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಯಲಿದೆ. ದರ ನಿಗದಿಯಾಗದಿದ್ದರೆ ನಾಳೆಯಿಂದ ಉಗ್ರ ಹೋರಾಟದ ಎಚ್ಚರಿಕೆ.
ಬೆಳಗಾವಿ: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ಮತ್ತಷ್ಟು ಭುಗಿಲೆದ್ದಿದ್ದು, ನ್ಯಾಯಯುತ ಬೆಲೆ ಹಾಗೂ ಪ್ರೋತ್ಸಾಹ ಧನಕ್ಕಾಗಿ ಆಗ್ರಹಿಸಿ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಮುಗಿಬಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ
ಸತೀಶ್ ಜಾರಕಿಹೊಳಿ ಹಾಗೂ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಂಘಟನೆಯ ಮುಖಂಡರೊಂದಿಗೆ ಅತ್ಯಂತ ನಿರ್ಣಾಯಕ ಸಭೆ ಆರಂಭವಾಗಲಿದೆ.
ರೈತ ಮುಖಂಡ
ಗಣೇಶ್ ಇಳಿಗೇರ್ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಅನ್ನದಾತರು, ಡಿಸಿ ಕಚೇರಿ ಎದುರೇ ರಸ್ತೆ ಬದಿಯಲ್ಲಿ ಅಡುಗೆ ಮಾಡುವ ಮೂಲಕ ಸರ್ಕಾರದ ವಿರುದ್ಧ ತಮ್ಮ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಇಂದಿನ ಸಭೆಯಲ್ಲಿ ಕಬ್ಬಿನ ದರ ನಿಗದಿಯಾಗುವ ಸಾಧ್ಯತೆಯಿದ್ದು, ಒಂದು ವೇಳೆ ರೈತರ ಬೇಡಿಕೆ ಈಡೇರದಿದ್ದರೆ ನಾಳೆಯಿಂದ ಹೋರಾಟ ಮತ್ತಷ್ಟು ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ಮುಖಂಡರ ವಾಗ್ದಾಳಿ:
ಇದೇ ವೇಳೆ, ಸರ್ಕಾರದ ಆರ್ಥಿಕ ಸ್ಥಿತಿಯ ಬಗ್ಗೆ ಉಪಮುಖ್ಯಮಂತ್ರಿಗಳು ಹಾಗೂ ಸರ್ಕಾರದ ವಲಯದಿಂದ ಕೇಳಿಬಂದಿರುವ ಹೇಳಿಕೆಗಳಿಗೆ ರೈತರು ತೀವ್ರ ಕಿಡಿಕಾರಿದ್ದಾರೆ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂಬ ಹೇಳಿಕೆಯನ್ನು ಖಂಡಿಸಿರುವ ರೈತ ಮುಖಂಡರು, ಜನರ ತೆರಿಗೆ ಹಣದಿಂದ ಮಂತ್ರಿಗಳು ಐಷಾರಾಮಿ ಕಾರು ಮತ್ತು ಬಂಗಲೆಗಳಲ್ಲಿ ಆಳುತ್ತಿದ್ದಾರೆ, ಆದರೆ ಅನ್ನದಾತರಿಗೆ ಪ್ರೋತ್ಸಾಹ ಧನ ನೀಡುವಾಗ ಮಾತ್ರ ಬೊಕ್ಕಸ ಖಾಲಿ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.
"ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಸಾಲ ಮಾಡುತ್ತದೆ. ಅದೇ ರೀತಿ ಕಬ್ಬು ಬೆಳೆಗಾರರಿಗೂ ಕೂಡ ಆರನೇ ಗ್ಯಾರಂಟಿಯಾಗಿ ವಿಶೇಷ ಪ್ಯಾಕೇಜ್ ಅಥವಾ ಪ್ರೋತ್ಸಾಹ ಧನ ಘೋಷಣೆ ಮಾಡಬೇಕು" ಎಂದು ರೈತ ಮುಖಂಡ ಗಣೇಶ್ ಇಳಿಗೇರ್ ಆಗ್ರಹಿಸಿದ್ದಾರೆ.
ಸಭೆಯ ನಿರ್ಧಾರದ ಮೇಲೆ ಇಡೀ ಬೆಳಗಾವಿ ಜಿಲ್ಲೆಯ ಕೃಷಿ ವಲಯದ ಕಣ್ಣು ನೆಟ್ಟಿದ್ದು, ಸರ್ಕಾರದ ಮುಂದಿನ ನಡೆಯ ಬಗ್ಗೆ ತೀವ್ರ ಕುತೂಹಲ ಮೂಡಿದೆ.