ಮಕ್ಕಳ ದಿನಾಚರಣೆಯ ಮುನ್ನಾದಿನ ಬೆಳಗಾವಿಯಲ್ಲಿ ಮಹೇಶ್ವರಿ ಅಂಧ ಮಕ್ಕಳ ಶಾಲೆಗೆ ನೂತನ ಸಭಾಂಗಣವನ್ನು ಶಾಸಕ ಆಸಿಫ್ ಸೇಠ್ ಉದ್ಘಾಟಿಸಿದರು.
ಬೆಳಗಾವಿ: ಮಕ್ಕಳ ದಿನಾಚರಣೆಯ ಸಂಭ್ರಮದ ಮುನ್ನಾದಿನದಂದು, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ
ಆಸಿಫ್ (ರಾಜು) ಸೇಠ್ ಅವರು ನಗರದ ಮಹೇಶ್ವರಿ ಅಂಧ ಮಕ್ಕಳ ಶಾಲೆಗೆ ಭೇಟಿ ನೀಡಿ, ಶಾಸಕರ ಅನುದಾನದಡಿ ನಿರ್ಮಿಸಲಾದ ನೂತನ ಸಭಾಂಗಣವನ್ನು ಲೋಕಾರ್ಪಣೆಗೊಳಿಸಿದರು.
ನೂತನ ಸಭಾಂಗಣದ ನಿರ್ಮಾಣದಿಂದಾಗಿ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ವಿಶಾಲವಾದ ವೇದಿಕೆ ಲಭ್ಯವಾದಂತಾಗಿದೆ. ಈ ಸೌಲಭ್ಯವು ಶಾಲೆಯ ಮೂಲಸೌಕರ್ಯವನ್ನು ಬಲಪಡಿಸುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ವಾತಾವರಣವನ್ನು ಇನ್ನಷ್ಟು ಸುಧಾರಿಸಲಿದೆ.
ಶಿಕ್ಷಣಕ್ಕೆ ಆದ್ಯತೆ:
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ
ಆಸಿಫ್ ಸೇಠ್, "ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ಶಾಲಾ-ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ವಿಶೇಷ ಚೇತನ ಮಕ್ಕಳಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ," ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದರ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಕಲಿಕಾ ವಾತಾವರಣ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸದಾ ಬದ್ಧನಾಗಿದ್ದೇನೆ.

ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ
ಸಿ. ಗ್ರಾಮೋಪಾಧ್ಯಾಯೆ, ಕಾರ್ಯದರ್ಶಿ
ಎಸ್. ಶಿವಂಗಿ, ಮುಖ್ಯೋಪಾಧ್ಯಾಯಿನಿ
ಅನಿತಾ ಗವಾಡೆ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.