ಬೆಳಗಾವಿ ಮಹಾನಗರ ಪಾಲಿಕೆಗೆ ಇ-ಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ ಅಪರಿಚಿತರು ಬೆದರಿಕೆ ಹಾಕಿದ್ದು, ಸ್ಥಳಕ್ಕೆ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ಶೋಧ ನಡೆಸುತ್ತಿವೆ.
ಬೆಳಗಾವಿ: ನಗರದ
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಗೆ ಅಪರಿಚಿತ ಕಿಡಿಗೇಡಿಗಳಿಂದ ಇ-ಮೇಲ್ ಮುಖಾಂತರ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿದ್ದು, ಪಾಲಿಕೆ ಆವರಣದಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಗಂಭೀರತೆಯನ್ನು ಅರಿತ ಪೊಲೀಸ್ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ಇಡೀ ಕಟ್ಟಡವನ್ನು ಖಾಲಿ ಮಾಡಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಸ್ಥಳಕ್ಕೆ ದೌಡಾಯಿಸಿದ ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳ:
ವಿಷಯ ತಿಳಿಯುತ್ತಿದ್ದಂತೆ
ಮಾರ್ಕೆಟ್ ಪೊಲೀಸ್ ಇನ್ಸ್‌ಪೆಕ್ಟರ್ ಕಾಲಿಮಿರ್ಜಿ ಅವರ ನೇತೃತ್ವದ ಪೊಲೀಸ್ ಪಡೆ,
ಬಾಂಬ್ ನಿಷ್ಕ್ರಿಯ ದಳ ಹಾಗೂ
ಶ್ವೇಾನ ದಳದ ತಜ್ಞರು ಪಾಲಿಕೆ ಕಚೇರಿಗೆ ಆಗಮಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಕಚೇರಿಯಿಂದ ಹೊರಕಳುಹಿಸಲಾಗಿದ್ದು, ಇಡೀ ಕಟ್ಟಡವನ್ನು ಪೋಲಿಸ್ ಸುಪರ್ದಿಗೆ ಪಡೆಯಲಾಗಿದೆ.
ಪಾಲಿಕೆಯ ಪ್ರತಿಯೊಂದು ವಿಭಾಗ, ಕಡತ ಕೊಠಡಿ, ಮೇಯರ್ ಮತ್ತು ಆಯುಕ್ತರ ಚೇಂಬರ್ ಹಾಗೂ ಕಟ್ಟಡದ ಸುತ್ತಮುತ್ತಲಿನ ಪರಿಸರದಲ್ಲಿ ದಳದ ಸಿಬ್ಬಂದಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಇದು ಹುಸಿ ಬಾಂಬ್ ಬೆದರಿಕೆಯೇ (Hoax Bomb Threat) ಅಥವಾ ಕಟ್ಟಡದಲ್ಲಿ ಯಾವುದೇ ಅಪಾಯಕಾರಿ ವಸ್ತುವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಪರಿಶೀಲನೆ ಕಾಯ್ದುಕೊಳ್ಳಲಾಗಿದೆ.
ಸೈಬರ್ ಪೋಲಿಸ್ ವಿಭಾಗದಿಂದ ತನಿಖೆ ಚುರುಕು:
ಇ-ಮೇಲ್ ಸಂದೇಶ ಬಂದಿರುವ ಮೂಲದ ಕುರಿತು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು,
"ಪಾಲಿಕೆ ಕಚೇರಿಗೆ ಬೆದರಿಕೆ ಇ-ಮೇಲ್ ಬಂದಿರುವುದು ನಿಜ. ಪ್ರಸ್ತುತ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದಿಂದ ಪರಿಶೀಲನೆ ನಡೆಯುತ್ತಿದೆ. ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು. ಇ-ಮೇಲ್ ಮೂಲದ ಐಪಿ ವಿಳಾಸವನ್ನು ಶೀಘ್ರದಲ್ಲೇ ಟ್ರ್ಯಾಕ್ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು"
ಎಂದು ತಿಳಿಸಿದ್ದಾರೆ.